ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಜನವರಿ 4ರ೦ದು ವಿಶ್ವಾರ್ಪಣಂ ಹಾಗೂ ಪಲಿಮಾರು ಶ್ರೀಗಳಿಗೆ ಗುರುವಂದನೆ-ಶ್ರೀ ನರಹರಿ ತೀರ್ಥ ಪ್ರಶಸ್ತಿ ಪ್ರದಾನ
ಉಡುಪಿ: ಅದಮಾರು ಮಠದ ಹಿರಿಯ ಯತಿಗಳಾದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀ ಪಾದರ ಅನುಗ್ರಹದೊಂದಿಗೆ ಶ್ರೀ ಅದಮಾರು ಮಠದ ಕಿರಿಯ ಶ್ರೀಗಳಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಆಶಯದಂತೆ ವಿಶ್ವಾರ್ಪಣಂ 35 ರ ಕಾರ್ಯಕ್ರಮದಲ್ಲಿ ಪಲಿಮಾರು ಮಠದ ಹಿರಿಯ ಯತಿಗಳಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಗೆ ಗುರುವಂದನಾ ಕಾರ್ಯಕ್ರಮವು ಜನವರಿ 4 ಶನಿವಾರ ಅಪರಾಹ್ಣ 2:30ಕ್ಕೆ ಉಡುಪಿಯ ಪೂರ್ಣಪ್ರಜ್ಞ ಆಡಿಟೋರಿಯಂ ನಲ್ಲಿ ನಡೆಯಲಿದೆ.
ಜಗತ್ತಿನ ಬೇರೆ ಬೇರೆ ಕಡೆಗಳಲ್ಲಿ ನಡೆಯುವ ವಿದ್ಯಮಾನಗಳು ಹಾಗೂ ಸನಾತನ ಸಂಸ್ಕೃತಿಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ನಡೆಸಲಾಗುತ್ತಿರುವ ಈ ಕಾರ್ಯಕ್ರಮದಲ್ಲಿ ದೇಶದ ಅನೇಕ ಚಿಂತಕರೂ, ವಿದ್ವಾಂಸರೂ ಈಗಾಗಲೇ ಉಪನ್ಯಾಸಗಳನ್ನಿತ್ತು ದೇಶದ ಸಮಸ್ಯೆಗಳ ಮೇಲೆ ಬೆಳಕನ್ನು ಬೀರಿರುತ್ತಾರೆ. 35 ನೇ ವಿಶ್ವಾರ್ಪಣಂ ಕಾರ್ಯಕ್ರಮದ ಅಂಗವಾಗಿ ದೇಶದ ಪ್ರಖ್ಯಾತ ಚಿಂತಕಿ, ಸನಾತನ ಧರ್ಮದಲ್ಲಿ ಆಳವಾಗಿ ಅಧ್ಯಯನ ಮಾಡಿರುವ ಮೀನಾಕ್ಷಿ ಶಹರಾವತ್ ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಬಾಂಗ್ಲಾ ಪಾಠ ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಇದೇ ಸಂದರ್ಭದಲ್ಲಿ ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರಿಗೆ ಗುರುವಂದನೆ ನಡೆಯಲಿದೆ. ಈ ಹಿಂದೆ ಅದಮಾರು ಮಠದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರಿಗೆ ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಗುರುವಂದನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದೀಗ ಪಲಿಮಾರು ಹಿರಿಯ ಶ್ರೀಗಳಿಗೆ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಪ್ರಸಿದ್ಧ ಗಾಯಕಿ ಶ್ರೀಮತಿ ನಂದಿನಿ ಪುಣೆ ಇವರ ಸಂಗೀತ ಕಛೇರಿ ಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ.
ಯಕ್ಷಗಾನ ಕಲೆಯನ್ನು ಪ್ರಾರಂಭಿಸಿದ ಆಚಾರ್ಯ ಮಧ್ವರ ನೇರ ಶಿಷ್ಯರಾದ ಶ್ರೀ ನರಹರಿ ತೀರ್ಥ ಶ್ರೀಪಾದರ ನೆನಪಿನಲ್ಲಿ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ತಮ್ಮ ಪರ್ಯಾಯ ಕಾಲಾವಧಿಯಲ್ಲಿ ನರಹರಿ ತೀರ್ಥ ಪ್ರಶಸ್ತಿಯನ್ನು ಪ್ರಾರಂಭಿಸಿದ್ದು ಯಕ್ಷಗಾನ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಗೈದ ಸಾಧಕರಿಗೆ ರೂಪಾಯಿ 50,000 ನಗದಿನೊಂದಿಗೆ ಶ್ರೀ ನರಹರಿ ತೀರ್ಥ ಪ್ರಶಸ್ತಿಯನ್ನು ಈ ಬಾರಿ ಕುಮಟಾ ತಾಲೂಕಿನ ಆನೆಗುಂದಿ ಕತಗಾಲದ ಶ್ರೀಧರ ಮಹಾಬಲೇಶ್ವರ ಷಡಕ್ಷರಿಯವರಿಗೆ ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು.
ಸಾಧಕ ತ್ರಯರಾದ ಶ್ರೀ ಡಾ. ಜಿಎಸ್ ಚಂದ್ರಶೇಖರ್ ಉಡುಪಿ, ಶ್ರೀ ಡಾ. ವಿನೀತ್ ಆನಂದ ಭದ್ರಾವತಿ ಮತ್ತು ಶ್ರೀ ಮುರಳೀಧರ ಹತ್ವಾರ್ ಬೇಲೂರು ಇವರಿಗೆ ಇದೇ ಸಂದರ್ಭದಲ್ಲಿ ಶ್ರೀಪಾದರುಗಳು ಮಂತ್ರಾಕ್ಷತೆ ನೀಡಿ ಹರಸಲಿರುವರು.
ಕಾರ್ಯಕ್ರಮದಲ್ಲಿ ಅದಮಾರು ಮಠದ ಹಿರಿಯ ಯತಿಗಳಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಕಿರಿಯ ಯತಿಗಳಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹಾಗೂ ಪಲಿಮಾರು ಮಠದ ಕಿರಿಯ ಶ್ರೀಗಳಾದ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದು ಆಶೀರ್ವಚಿಸಲಿದ್ದಾರೆ.
ಪಲಿಮಾರು ಹಿರಿಯ ಶ್ರೀಪಾದರ ಗುರುವಂದನೆ ಹಾಗೂ ಉಪನ್ಯಾಸ ಕಾರ್ಯಕ್ರಮಕ್ಕೆ ಶ್ರೀ ಕೃಷ್ಣ ಸೇವಾ ಬಳಗದ ಪರವಾಗಿ ಸರ್ವರನ್ನೂ ಆತ್ಮೀಯವಾಗಿ ಆಮಂತ್ರಿಸಲಾಗಿದೆ.