ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಟೆಕ್ಕಿ ಆತ್ಮಹತ್ಯೆ: ಯುಪಿಗೆ ತೆರಳಿದ ಬೆಂಗಳೂರು ಪೊಲೀಸರು; ತನ್ನ ತಂದೆಯ ಸಾವಿಗೆ ಅತುಲ್ ಕುಟುಂಬ ಕಾರಣ ಎಂದ ಪತ್ನಿ ನಿಕಿತಾ!
ಬೆಂಗಳೂರು: ಮಾರತ್ತಹಳ್ಳಿಯ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದಲ್ಲಿ ಎರಡು ಕುಟುಂಬಗಳ ನಡುವೆ ಸಾವು, ಕಿರುಕುಳ, ಸುಲಿಗೆ ಮತ್ತು ಭ್ರಷ್ಟಾಚಾರ ಆರೋಪ, ಪ್ರತ್ಯಾರೋಪದೊಂದಿಗೆ ರಾಷ್ಟ್ರ ಮಟ್ಟದಲ್ಲಿ ಭಾರೀ ಸುದ್ದಿಯಾಗುತ್ತಿದೆ. Accenture ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 34 ವರ್ಷದ ಅತುಲ್ ಸುಭಾಷ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹಾಗೂ ಚರ್ಚೆಗೆ ಕಾರಣವಾಗಿದೆ.
ತನ್ನಿಂದ ದೂರವಿರುವ ಪತ್ನಿ ಹಾಗೂ ಆಕೆಯ ಕುಟುಂಬದವರೇ ನನ್ನ ಆತ್ಮಹತ್ಯೆಗೆ ಕಾರಣ ಎಂದು ಅತುಲ್ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದರು. ಆದರೆ ಈ ಆರೋಪವನ್ನು ಅತುಲ್ ಪತ್ನಿ ಕಡೆಯವರು ನಿರಾಕರಿಸಿದ್ದಾರೆ.
ಮಾರತಹಳ್ಳಿಯ ಮಂಜುನಾಥ್ ಲೇಔಟ್ ನ ಅಪಾರ್ಟ್ ಮೆಂಟ್ ವೊಂದರಲ್ಲಿ ಸೋಮವಾರ 24 ಪುಟಗಳ ಸೂಸೈಡ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಅತುಲ್,ತನ್ನ ವಿರುದ್ಧ ಸುಳ್ಳು ದಾಖಲಿಸಿರುವ ಪತ್ನಿ ಹಾಗೂ ಆಕೆಯ ಕುಟುಂಬ ಸದಸ್ಯರು ಇತ್ಯರ್ಥಕ್ಕಾಗಿ ರೂ. 3 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ತನ್ನ ನಾಲ್ಕು ವರ್ಷದ ಮಗನಿಗಾಗಿ ರೂ. 30 ಲಕ್ಷ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದರು. ಉತ್ತರ ಪ್ರದೇಶ ಮೂಲದ ಸುಭಾಷ್ ನ್ಯಾಯಾಧೀಶರೊಬ್ಬರ ಮೇಲೂ ಆರೋಪ ಮಾಡಿದ್ದಾರೆ.
ಪುರುಷರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಇಕಾಮ್ ನ್ಯಾಯ ಫೌಂಡೇಶನ್, ಪ್ರಕರಣವನ್ನು ಸುಪ್ರೀಂ ಕೋರ್ಟ್‌ಗೆ ತೆಗೆದುಕೊಂಡು ಹೋಗಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಈ ಮಧ್ಯೆ ಅವರ ಪತ್ನಿ ನಿಕಿತಾ ಸಿಂಘಾನಿಯಾ, ತನ್ನ ವಿರುದ್ಧದ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಅತುಲ್ ಹಾಗೂ ಅವರ ಕುಟುಂಬ ಸದಸ್ಯರು ವರದಕ್ಷಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ನಿಕಿತಾ ಏಪ್ರಿಲ್ 24, 2022 ರಂದು ಜಾನ್ಪುರ್ ಕೊಟ್ವಾಲಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಏಪ್ರಿಲ್ 26, 2019ರಲ್ಲಿ ವಾರಣಾಸಿಯಲ್ಲಿ ಮದುವೆಯಾದ ನಂತರ ಅತುಲ್ ಕುಟುಂಬದವರು ರೂ. 10 ಲಕ್ಷ ವರದಕ್ಷಣೆ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆಗಸ್ಟ್ 16, 2019 ರಂದು ಮತ್ತೆ ರೂ. 10 ಲಕ್ಷ ತರುವಂತೆ ಬೇಡಿಕೆ ಇಟ್ಟಿದ್ದರಿಂದ ಮಾರನೇ ದಿನವೇ ನನ್ನ ತಂದೆ ಸಾವನ್ನಪ್ಪಿದ್ದರು ಎಂದು ನಿಕಿತಾ ದಾಖಲಿಸಿರುವ ಎಫ್ ಐಆರ್ ನಲ್ಲಿ ಹೇಳಲಾಗಿದೆ. ತನ್ನ ಪೋಷಕರ ಮನೆಗೆ ಹಿಂದಿರುಗುವ ಮೊದಲು ಮೇ 17, 2021 ರಂದು ಅತುಲ್ ತನ್ನ ಮತ್ತು ತಾಯಿಯ ಮೇಲೆ ಹಲ್ಲೆ ನಡೆಸಿದ್ದರು ಎಂಬ ನಿಕಿತಾ ಆರೋಪಿಸಿದ್ದರು. ಈ ಆರೋಪವನ್ನು ಡೆತ್ ನೋಟ್ ನಲ್ಲಿ ಅತುಲ್ ನಿರಾಕರಿಸಿದ್ದಾರೆ.
ಮತ್ತೊಂದು ಕಡೆ ಅತುಲ್ ಸಹೋದರ ಬಿಕಾಸ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಎಫ್ ಐಆರ್ ನಲ್ಲಿ ನಿಕಿತಾ, ಆಕೆಯ ತಾಯಿ ನಿಶಾ ಸಿಂಘಾನಿಯಾ, ಅವರ ಸಹೋದರ ಅನುರಾಗ್ ಸಿಂಘಾನಿಯಾ ಮತ್ತು ಅವರ ಚಿಕ್ಕಪ್ಪ ಸುಶೀಲ್ ಸಿಂಘಾನಿಯಾ ಅವರ ಹೆಸರಿದ್ದು, BNS ಸೆಕ್ಷನ್ 108 ಮತ್ತು 3(5) ಅಡಿಯಲ್ಲಿ ಆರೋಪಗಳನ್ನು ಮಾಡಲಾಗಿದೆ.
ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಉತ್ತರ ಪ್ರದೇಶಕ್ಕೆ ತೆರಳಿದ್ದು, ಟೆಕ್ಕಿಯ ಪತ್ನಿ, ಆಕೆಯ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಲಿದ್ದಾರೆ. ಎಲ್ಲಾ ಆಯಾಮಗಳಲ್ಲಿ ಪ್ರಕರಣದ ತನಿಖೆ ನಡೆಸಲು ಪರಿಶೀಲಿಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.