ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಭಾರತೀಯ ನೌಕಾಪಡೆ ಬತ್ತಳಿಕೆಗೆ ಸೇರಿದ ಶಕ್ತಿಶಾಲಿ ‘ದೃಷ್ಟಿ’ ಡ್ರೋನ್; ಅದಾನಿ ಕಂಪನಿಯಿಂದ ಎರಡನೇ ಯುಎವಿ ಸರಬರಾಜು
ನವದೆಹಲಿ, ಡಿಸೆಂಬರ್ 4: ಅದಾನಿ ಡಿಫೆನ್ಸ್ ಅಂಡ್ ಏರೋಸ್ಪೇಸ್ ಕಂಪನಿ ನಿರ್ಮಿಸಿರುವ ದೃಷ್ಟಿ-10 ಸ್ಟಾರ್ಲೈನರ್ ಡ್ರೋನ್ ಅನ್ನು ಭಾರತೀಯ ನೌಕಾಪಡೆ ಪಡೆದುಕೊಂಡಿದೆ. ಇದು ಅದಾನಿಯಿಂದ ಸರಬರಾಜು ಆದ ಎರಡನೇ ಡ್ರೋನ್ ಆಗಿದೆ. ಸಮುದ್ರದಲ್ಲಿ ಸಾಗುವ ಹಡಗುಗಳ ಮೇಲೆ ಕಣ್ಣಿಡಲು ಮತ್ತು ಸಾಗರ ವಲಯದ ಭದ್ರತೆಗೆ ಸಹಾಯವಾಗಲು ಈ ಡ್ರೋನ್ಗಳನ್ನು ಬಳಸಲಾಗುತ್ತದೆ. 2024ರ ಜನವರಿಯಲ್ಲಿ ಮೊದಲ ದೃಷ್ಟಿ-10 ಸ್ಟಾರ್ಲೈನರ್ ಡ್ರೋನ್ ಅನ್ನು ನೌಕಾಪಡೆಗೆ ನೀಡಲಾಗಿತ್ತು. ಭಾರತೀಯ ಸೇನೆಯೂ ಕೂಡ ಈ ಡ್ರೋನ್ಗಳನ್ನು ಪಡೆಯುತ್ತಿದೆ.
ಇಸ್ರೇಲ್ನ ಎಲ್ಬಿಟ್ ಸಿಸ್ಟಮ್ಸ್ ಕಂಪನಿಯ ಸಹಯೋಗದಲ್ಲಿ ಅದಾನಿ ಡಿಫೆನ್ಸ್ ಅಂಡ್ ಏರೋಸ್ಪೇಸ್ ಕಂಪನಿ ದೃಷ್ಟಿ-10 ಸ್ಟಾರ್ಲೈನರ್ ಡ್ರೋನ್ ಅನ್ನು ತಯಾರಿಸುತ್ತಿದೆ. ಇದು ಮೂಲತಃ ಎಲ್ಬಿಟ್ ಸಿಸ್ಟಮ್ಸ್ನ ಹರ್ಮಿಸ್-900 ಎನ್ನುವ ಡ್ರೋನ್ನ ಭಾರತೀಯ ಆವೃತ್ತಿಯಾಗಿದೆ.
ಹರ್ಮಿಸ್-900 ವಿಶ್ವದ ಬಲಶಾಲಿ ಡ್ರೋನ್ಗಳಲ್ಲಿ ಒಂದೆನಿಸಿದೆ. ಎಂಕ್ಯೂ-9 ರೀಪರ್, ಗ್ಲೋಬ್ ಹಾಕ್, ಬಾಯ್ರಾಕ್ತರ್ ಟಿಬಿ2, ವಿಂಗ್ ಲೂಂಗ್-2 ನಂತರ ಹರ್ಮಿಸ್-900 ಪ್ರಬಲ ಡ್ರೋನ್ ಎಂದು ಗುರುತಿಸಲಾಗಿದೆ. ಇದು 30,000 ಅಡಿ ಎತ್ತರದವರೆಗೂ ಹೋಗಬಲ್ಲುದು. 30 ಗಂಟೆ ನಿರಂತರವಾಗಿ ಚಾಲನೆಯಲ್ಲಿರಬಹುದು. ಹತ್ತಿರ ಹತ್ತಿರ ಒಂದು ಟನ್ ತೂಕದ ಈ ಡ್ರೋನ್ ಸುಮಾರು 300 ಕಿಲೋ ಪೇಲೋಡ್ ಹೊತ್ತು ಹಾರಾಟ ಮಾಡಬಲ್ಲುದು.
ಸರಹದ್ದುಗಳನ್ನು ಕಾಯಲು, ಶತ್ರುಗಳ ಮೇಲೆ ನಿಗಾ ಇಡಲು, ಭದ್ರತೆ ಹೆಚ್ಚಿಸಲು ಈ ಡ್ರೋನ್ ಬಹಳ ಉಪಯುಕ್ತವಾಗಿದೆ. ಇದೇ ಡ್ರೋನ್ ಅನ್ನು ಇಸ್ರೇಲೀ ಕಂಪನಿಯ ಸಹಯೋಗದಲ್ಲಿ ಅದಾನಿ ಡಿಫೆನ್ಸ್ ಅಂಡ್ ಏರೋಸ್ಪೇಸ್ ಭಾರತದಲ್ಲಿ ತಯಾರಿಸುತ್ತಿದೆ. ಹೈದರಾಬಾದ್ ಫ್ಯಾಕ್ಟರಿಯಲ್ಲಿ ಇದರ ತಯಾರಿಕೆ ನಡೆಯುತ್ತಿದೆ.
ಜೂನ್ ತಿಂಗಳಲ್ಲಿ ಭಾರತೀಯ ಸೇನೆಯು ದೃಷ್ಟಿ-10 ಡ್ರೋನ್ ಅನ್ನು ಪಡೆದಿದ್ದು, ಅದನ್ನು ಭಾರತ ಮತ್ತು ಪಾಕಿಸ್ತಾನದ ಗಡಿ ಉದ್ದಗಲಕ್ಕೂ ನಿಗಾ ಇಡಲು ಬಳಕೆ ಮಾಡಲಾಗುತ್ತಿದೆ. ಇದೇ ರೀತಿ ಮತ್ತೊಂದು ಡ್ರೋನ್ ಅನ್ನು ಸೇನೆಯು ಪಡೆಯುತ್ತಿದೆ. ಭಾರತದ ಮಿಲಿಟರಿಗೆ ಒಟ್ಟು ಇಂಥ ನಾಲ್ಕು ಡ್ರೋನ್ಗಳು ಸಿಕ್ಕಂತಾಗುತ್ತಿದೆ.