ಫೆಂಗಲ್ ಚಂಡಮಾರುತದ ಅಬ್ಬರ: ಪುದುಚೇರಿ, ವಿಲ್ಲುಪುರಂನಲ್ಲಿ ಭಾರಿ ಮಳೆ, ಒಂಬತ್ತು ಮಂದಿ ಸಾವು
ಚೆನ್ನೈ: ನಿಧಾನವಾಗಿ ಚಲಿಸುತ್ತಿರುವ ‘ಫೆಂಗಲ್’ ಚಂಡಮಾರುತ ವಿಲ್ಲುಪುರಂ ಮತ್ತು ಪುದುಚೇರಿಯಲ್ಲಿ ಭಾರೀ ಮಳೆಯನ್ನುಂಟು ಮಾಡಿದೆ. ಶನಿವಾರ ರಾತ್ರಿಯಿಂದ ವಿಲ್ಲುಪುರಂ, ಪುದುಚೇರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಿದೆ. ಇದರ ಪರಿಣಾಮವಾಗಿ ಕೇಂದ್ರಾಡಳಿತ ಪ್ರದೇಶದಲ್ಲಿ ದಾಖಲೆಯ 49 ಸೆಂ.ಮೀ ಮಳೆಯಾಗಿದೆ.
ಇದು ಪುದುಚೇರಿ ಇತಿಹಾಸದಲ್ಲಿಯೇ ಅತ್ಯಧಿಕವಾಗಿದೆ ಮತ್ತು ವಿಲ್ಲುಪುರಂನಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದ್ದು,ಮೈಲಂನಲ್ಲಿನ ಸ್ವಯಂಚಾಲಿತ ಹವಾಮಾನ ಕೇಂದ್ರದಲ್ಲಿ 51 ಸೆಂ.ಮೀ.ನಷ್ಟು ಮಳೆ ಬಿದ್ದಿದೆ.
ಅಧಿಕೃತ ಮೂಲಗಳ ಪ್ರಕಾರ, ಪುದುಚೇರಿಯಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ನಾಲ್ವರು, ತಿರುವಣ್ಣಾಮಲೈನಲ್ಲಿ ಮೂವರು ಮತ್ತು ವೆಲ್ಲೂರು ಮತ್ತು ಚೆನ್ನೈ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಮಳೆಯಿಂದಾಗಿ ವೆಲ್ಲೂರು, ರಾಣಿಪೇಟ್, ತಿರುಪತ್ತೂರ್, ಧರ್ಮಪುರಿ ಮತ್ತು ಸೇಲಂನಲ್ಲಿ ಶಾಲೆಗಳು ಮತ್ತು ತಿರುವಣ್ಣಾಮಲೈ, ಕಡಲೂರು, ವಿಲ್ಲುಪುರಂ, ಪುದುಚೇರಿ ಮತ್ತು ಕೃಷ್ಣಗಿರಿಯಲ್ಲಿ ಶಾಲಾ ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ.
ದಾಖಲೆ ಮಳೆಯಿಂದಾಗಿ ಪುದುಚೇರಿಯಲ್ಲಿನ ಜನವಸತಿ ಪ್ರದೇಶಗಳು ಮತ್ತು ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಉಪ್ಪನಾರ್ ಕಾಲುವೆ ತುಂಬಿ ಹರಿಯುತ್ತಿದೆ. ವಿಲ್ಲುಪುರಂ ಜಿಲ್ಲೆಯ ಕೆಲವು ಭಾಗಗಳು ಸಹ ಭಾರೀ ಪ್ರಮಾಣದಲ್ಲಿ ಜಲಾವೃತಗೊಂಡಿವೆ, ಆದಾಗ್ಯೂ, ಮಳೆಗೆ ಸಂಬಂಧಿಸಿದ ಯಾವುದೇ ಸಾವುಗಳು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪುದುಚೇರಿ, ವಿಲ್ಲುಪುರಂನಲ್ಲಿ ರೆಡ್ ಆಲರ್ಟ್: ಪುದುಚೇರಿಯಲ್ಲಿ ಪತುಕನ್ನು ಮತ್ತು ತಿರುಕಣ್ಣೂರಿನಲ್ಲಿ ಕ್ರಮವಾಗಿ 45 ಸೆಂ.ಮೀ ಮತ್ತು 43 ಸೆಂ.ಮೀ ಮಳೆಯಾಗಿದ್ದರೆ, ಪುದುಚೇರಿ ನಗರ ಮತ್ತು ಬಹೂರ್ ನಲ್ಲಿ ಕ್ರಮವಾಗಿ 40 ಸೆಂ.ಮೀ ಮತ್ತು 32 ಸೆಂ.ಮೀ ಮಳೆ ದಾಖಲಾಗಿದೆ.
ವಿಲ್ಲುಪುರಂ ಜಿಲ್ಲೆಯಲ್ಲಿ, ಮೈಲಂ ಹೊರತುಪಡಿಸಿ, ತಿಂಡಿವನಂ ಮತ್ತು ನೆಮೂರ್‌ನಲ್ಲಿ ಕ್ರಮವಾಗಿ 37cm ಮತ್ತು 35cm ನಷ್ಟು ಭಾರಿ ಮಳೆಯಾಗಿದೆ. ಸೆಮ್ಮೆಡುವಿನಲ್ಲಿ 31 ಸೆಂ.ಮೀ ಮಳೆಯಾಗಿದ್ದರೆ, ವಳವನೂರ್ ಮತ್ತು ಕೊಲಿಯನೂರಿನಲ್ಲಿ 28 ಸೆಂ.ಮೀ ಮತ್ತು ವಿಲ್ಲುಪುರಂ ನಲ್ಲಿ 27 ಸೆಂ.ಮೀ ಮಳೆಯಾಗಿದೆ. ನೆರೆಯ ಜಿಲ್ಲೆಗಳಾದ ಕಡಲೂರು ಮತ್ತು ತಿರುವಣ್ಣಾಮಲೈನಲ್ಲಿ ಕ್ರಮವಾಗಿ 23 ಸೆಂ.ಮೀ ಮತ್ತು 22 ಸೆಂ.ಮೀ ಮಳೆ ದಾಖಲಾಗಿದೆ.