ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಉಡುಪಿ: ಕಬ್ಬಿನಾಲೆಯಲ್ಲಿ ನಕ್ಸಲರಿಗಾಗಿ ಮುಂದುವರಿದ ಶೋಧ ಕಾರ್ಯಾಚರಣೆ
ಹೆಬ್ರಿ ತಾಲೂಕಿನ ನಾಡಪಾಲ್ ಗ್ರಾಮದ ಪೀತಬೈಲು ಎಂಬಲ್ಲಿ ನಡೆದ ನಕ್ಸಲ್ ನಾಯಕ ವಿಕ್ರಂ ಗೌಡನ ಎನ್‌ಕೌಂಟರ್ ಬಳಿಕ ನಕ್ಸಲರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಕಬ್ಬಿನಾಲೆ, ಮತ್ತಾವು, ನಾಡ್ಪಾಲು, ಪೀತಬೈಲು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಎನ್‌ಎಫ್ ಸಿಬ್ಬಂದಿ ತೀವ್ರ ನಿಗಾ ವಹಿಸಿದ್ದಾರೆ.
ಹೆಬ್ರಿ ಪೊಲೀಸ್ ಠಾಣೆಯ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಹೆಬ್ರಿ ಠಾಣೆಯ ಪೊಲೀಸ್ ಸಿಬ್ಬಂದಿ ಹಾಗೂ ಎಎನ್‌ಎಫ್ ಸಿಬ್ಬಂದಿ ವಿಕ್ರಮ್ ಗೌಡ ಎನ್‌ಕೌಂಟರ್ ನಡೆದ ಪ್ರದೇಶದ ಸುತ್ತಮುತ್ತ ಶೋಧ ಕಾರ್ಯ ನಡೆಸುತ್ತಿದ್ದಾರೆ. ವಿಕ್ರಂ ಗೌಡನೊಂದಿಗೆ ಇದ್ದ ಇತರೆ ನಕ್ಸಲರು ತಪ್ಪಿಸಿಕೊಂಡಿರುವ ಹಿನ್ನೆಲೆ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎನ್ನಲಾಗಿದೆ.
ವಿಕ್ರಮ್ ಗೌಡ ಎನ್‌ಕೌಂಟರ್ ಬಳಿಕ ಕಬ್ಬಿನಾಲೆ ಸುತ್ತಮುತ್ತಲಿನ ಸಾರ್ವಜನಿಕರು ಭಯಭೀತರಾಗಿದ್ದಾರೆ. ಎನ್‌ಕೌಂಟರ್ ಪ್ರಕರಣ ನಡೆದ ಮನೆಯ ವಾರಸುದಾರರು ಇನ್ನು ತಮ್ಮ ಮನೆಗೆ ಹಿಂದಿರುಗಿಲ್ಲ. ವಿಕ್ರಮ್ ಗೌಡ ಮೃತ ಪಟ್ಟ ಹಿನ್ನೆಲೆ ಆ ಮನೆಯಲ್ಲಿ ಪೂಜಾ ಕಾರ್ಯದ ಬಳಿಕ ಮನೆ ಪ್ರವೇಶಿಸಲಿದ್ದಾರೆ ಎಂದು ಹೇಳಲಾಗಿದೆ. ಇನ್ನು ಪಕ್ಕದ ಮನೆಯಲ್ಲಿ ಎಎನ್‌ಎಫ್ ತಂಡ ಮೊಕ್ಕಾಂ ಹೂಡಿದೆ. ಹೀಗಾಗಿ ಆ ಮನೆಯಲ್ಲಿ ವಾಸವಿದ್ದವರು ಸಂಬಂಧಿಕರ ಮನೆಗೆ ತೆರಳಿದ್ದಾರೆ.
ತನಿಖಾಧಿಕಾರಿ, ಕಾರ್ಕಳ ಡಿವೈಎಸ್ ಪಿ. ಅರವಿಂದ್ ಮಾತನಾಡಿ, ಕಬ್ಬಿನಾಲೆ ಸಮೀಪ ಪೀತಬೈಲಿನಲ್ಲಿ ನಡೆದ ಎನ್‌ಕೌಂಟರ್ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಮರುಣೋತ್ತರ ಪರೀಕ್ಷೆ ಮತ್ತು ಎಫ್‌ಎಸ್‌ಎಲ್ ತಜ್ಞರ ವರದಿ ನಿರೀಕ್ಷೆಯಲ್ಲಿದ್ದೇವೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ಕೂಲಂಕಷವಾಗಿ ತನಿಖೆ ಮಾಡಲಾಗುತ್ತಿದೆ. ಎಲ್ಲಾ ಆಯಾಮಗಳಿಂದಲೂ ವಿಚಾರಣೆ ನಡೆಸಿ, ಸ್ಥಳ ಮಹಜರು, ಪರಿಶೀಲನೆ ಕೈಗೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.