ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ

ಕಂಬಳಕ್ಕೆ ಮತ್ತೆ ಅಡ್ಡಿ, ಪಿಲಿಕುಳದಲ್ಲಿ ಕಂಬಳ ನಡೆಸುವುದಕ್ಕೆ ಪ್ರಾಣಿಪ್ರಿಯರ ವಿರೋಧ: ಕೋರ್ಟ್‌ಗೆ ದೂರು

ಮಂಗಳೂರು, ನವೆಂಬರ್ 23: ಕರಾವಳಿಯಲ್ಲಿರುವಷ್ಟು ಕಂಬಳದ ಕ್ರೇಝ್ ಬೇರೆಲ್ಲೂ ಕಾಣಸಿಗದು. ತುಳುನಾಡ ಜನಪದ ಕ್ರೀಡೆಯಾಗಿ ಬೆಳೆದಿರುವ ಕಂಬಳ ಇಂದು ಸಾಕಷ್ಟು ಪ್ರಸಿದ್ದಿಯನ್ನು ಪಡೆದಿದೆ. ಇಲ್ಲಿನ ರೈತಾಪಿ ಜನ ತಮ್ಮ ಕೃಷಿ ಕಾರ್ಯಗಳಿಗೆ ಬಳಸುವ ಕೋಣಗಳನ್ನು ಪಳಗಿಸಿ ಅವುಗಳನ್ನು ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದು ಪ್ರತಿಷ್ಠೆ ಮೆರೆಯುವ ತನಕ ಈ ಕ್ರೀಡೆ ಬೆಳೆದು ನಿಂತಿದೆ. ವರ್ಷದಿಂದ ವರ್ಷಕ್ಕೆ ಕಂಬಳ ಪ್ರಸಿದ್ಧವಾಗುತ್ತಿದ್ದಂತೆಯೇ ಇತ್ತ ಕಂಬಳಕ್ಕೆ ನಿಷೇಧದ ಭೀತಿಯೂ ಹೆಚ್ಚಾಗುತ್ತಿದೆ.

ಕಂಬಳದಲ್ಲಿ ಪ್ರಾಣಿ ಹಿಂಸೆಯನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿ ಸುಮಾರು ಆರು ವರ್ಷಗಳ ಹಿಂದೆ ಪ್ರಾಣಿದಯಾ ಸಂಘ ಹೈಕೋರ್ಟ್ ಮೆಟ್ಟಿಲೇರಿತ್ತು. ಆ ಬಳಿಕ ಕಂಬಳಕ್ಕೆ ತಡೆ ನೀಡಲಾಗಿತ್ತು. ಪರ ವಿರೋಧದ ಚರ್ಚೆ ನಡೆದು ಕೊನೆಗೆ ಸರ್ಕಾರ ಹೈಕೋರ್ಟ್ ಆದೇಶಕ್ಕೆ ಸುಗ್ರೀವಾಜ್ಞೆ ತರುವಲ್ಲಿಯೂ ಯಶಸ್ವಿಯಾಗಿತ್ತು. ಇದೀಗ ಮತ್ತೆ ದಕ್ಷಿಣಕನ್ನಡ ಜಿಲ್ಲೆಯ ಪಿಲಿಕುಳದಲ್ಲಿ ನಡೆಯುವ ಕಂಬಳದ ಬಗ್ಗೆ ಅಪಸ್ವರ ಕೇಳಿ ಬಂದಿದೆ. ಮೃಗಾಲಯದ ಸಮೀಪ ಕಂಬಳ ನಡೆಯುವುದರಿಂದ ಮೃಗಾಲಯದ ಪ್ರಾಣಿಗಳಿಗೆ ತೊಂದರೆಯಾಗುತ್ತದೆ ಎಂದು ಪ್ರಾಣಿಪ್ರಿಯರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಪಿಲಿಕುಳದಲ್ಲಿ 13 ವರ್ಷಗಳಿಂದ ಸ್ಥಗಿತವಾಗಿದ್ದ ಕಂಬಳ

ಪಿಲಿಕುಳ ಮೃಗಾಲಯದ ಬಳಿ ನಡೆಯುತ್ತಿದ್ದ ಕಂಬಳ ಹದಿಮೂರು ವರ್ಷಗಳಿಂದ ಸ್ಥಗಿತವಾಗಿತ್ತು. ಹೀಗಾಗಿ ಈ ಬಾರಿಯ ಕಂಬಳ ಸೀಸನ್‌ನಲ್ಲಿ ಜಿಲ್ಲಾಡಳಿತದ ನೇತೃತ್ವದಲ್ಲೇ ಪಿಲಿಕುಳದಲ್ಲಿ ಸರ್ಕಾರಿ ಪ್ರಾಯೋಜಿತ ಕಂಬಳ ನಡೆಸುವುದಕ್ಕೆ ಎಲ್ಲಾ ತಯಾರಿ ಮಾಡಿಕೊಳ್ಳಲಾಗಿತ್ತು. ಕೇವಲ ಕಂಬಳ ಮಾತ್ರವಲ್ಲದೇ ಕೃಷಿ ಮತ್ತು ಜಾನುವಾರು ಮೇಳ, ಜಿಲ್ಲಾ ಮಟ್ಟದ ಜಾನಪದ ಕ್ರೀಡಾ ಕಾರ್ಯಕ್ರಮ ಸೇರಿದಂತೆ ನಾಲ್ಕು ದಿನಗಳ ತುಳುನಾಡು ಉತ್ಸವ ನಡೆಸಲು ತೀರ್ಮಾನಿಸಲಾಗಿತ್ತು.

ಪಿಲಿಕುಳ

ಆದ್ರೆ ಮೃಗಾಲಯದ ಬಳಿ ಕಂಬಳ ನಡೆಸಿದರೆ ಶಬ್ದಮಾಲಿನ್ಯದಿಂದ ಪ್ರಾಣಿಗಳಿಗೆ ತೊಂದರೆಯಾಗುತ್ತದೆ. ಇದರ ಜೊತೆ 200ಕ್ಕೂ ಹೆಚ್ಚು ಜೋಡಿ ಕೋಣ ಸ್ಪರ್ಧೆ ನಡೆಯುವ ಸ್ಥಳಕ್ಕೆ ಬರುವುದರಿಂದ ಮೃಗಾಲಯದ ಪ್ರಾಣಿಗಳಿಗೆ ವಿವಿಧ ರೀತಿಯ ರೋಗ ರುಜಿನಗಳು ಹರಡುವ ಸಾಧ್ಯತೆ ಇದೆ ಎಂಬುದು ಪ್ರಾಣಿಪ್ರಿಯರ ವಾದ. ಹೀಗಾಗಿ ಹೈಕೋರ್ಟ್‌ನಲ್ಲಿ ಹಾಕಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿ ಹೈಕೋರ್ಟ್ ಜಿಲ್ಲಾಡಳಿತ ಹಾಗೂ ಪಿಲಿಕುಳ ಅಭಿವೃದ್ದಿ ಪ್ರಾಧಿಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಪಿಲಿಕುಳ ಕಂಬಳ ಮಾತ್ರವಲ್ಲದೇ ಬೆಂಗಳೂರಿನಲ್ಲಿ ನಡೆಯುವ ಕಂಬಳಕ್ಕೂ ಪ್ರಾಣಿ ಪ್ರಿಯರು ವಿರೋಧ ವ್ಯಕ್ತಪಡಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಸದ್ಯ ಕಂಬಳ ನಡೆಸುವುದಕ್ಕೆ ಇವರ ವಿರೋಧವಿಲ್ಲ. ಆದರೆ, ನಡೆಸುವ ಸ್ಥಳಗಳ ಬಗ್ಗೆ ಹಾಗೂ ಪ್ರಾಣಿಗಳಿಗೆ ಆಗುವ ಹಿಂಸೆಯ ಬಗ್ಗೆ ಮಾತ್ರ ಇವರಿಗೆ ಆಕ್ಷೇಪವಿದೆ.

ಸದ್ಯ ಈ ದೂರಿನ ಸಂಬಂಧದ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಂಡಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

No Comments

Leave A Comment