ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ವಿಶ್ವ ದಾಖಲೆಯ ವೀರನನ್ನು ಕೋಚ್ ಆಗಿ ನೇಮಿಸಿಕೊಂಡ ನೀರಜ್ ಚೋಪ್ರಾ
ಭಾರತದ ಡಬಲ್ ಒಲಿಂಪಿಕ್ ಪದಕ ವಿಜೇತ ಮತ್ತು ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ತಮ್ಮ ಕೋಚ್ ಅನ್ನು ಬದಲಿಸಿದ್ದಾರೆ. ವಾಸ್ತವವಾಗಿ, ನೀರಜ್ ಚೋಪ್ರಾ ಇಲ್ಲಿಯವರೆಗೆ ಜರ್ಮನ್ ಕೋಚ್ ಕ್ಲಾಸ್ ಬಾರ್ಟೋನಿಟ್ಜ್ ಅವರ ತರಬೇತಿಯಲ್ಲಿ ಅಭ್ಯಾಸ ನಡೆಸುತ್ತಿದ್ದರು. ಆದರೆ ಕ್ಲಾಸ್ ಬಾರ್ಟೋನಿಟ್ಜ್ ಇತ್ತೀಚೆಗಷ್ಟೇ ಕೋಚಿಂಗ್‌ನಿಂದ ನಿವೃತ್ತರಾಗಿದ್ದು, ಇದೀಗ ಅವರ ಸ್ಥಾನಕ್ಕೆ 3 ಬಾರಿ ಒಲಂಪಿಕ್ ಚಾಂಪಿಯನ್ ಎಂಟ್ರಿಕೊಟ್ಟಿದ್ದಾರೆ.
ನೀರಜ್ ಚೋಪ್ರಾ ಅನುಭವಿ ಜಾನ್ ಝೆಲೆಜ್ನಿ ಅವರನ್ನು ಹೊಸ ಕೋಚ್ ಆಗಿ ನೇಮಿಸಿಕೊಂಡಿದ್ದಾರೆ. ಜಾನ್ ಝೆಲೆಜ್ನಿ ಮೂರು ಬಾರಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಆಗಿದ್ದು, ಅತೀ ದೂರ ಜಾವೆಲಿನ್ ಎಸೆದ ವಿಶ್ವ ದಾಖಲೆಯೂ ಝೆಲೆಜ್ನಿ ಹೆಸರಿನಲ್ಲಿದೆ.
ಜಾನ್ ಝೆಲೆಜ್ನಿ ಕ್ರಮವಾಗಿ 1992, 1996 ಮತ್ತು 2000 ರ ಒಲಂಪಿಕ್ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ ವಿಜೇತರಾಗಿದ್ದಾರೆ. ಹಾಗೆಯೇ ಸಾರ್ವಕಾಲಿಕ ಹತ್ತು ಅತ್ಯುತ್ತಮ ಜಾವೆಲಿನ್ ಥ್ರೋಗಳಲ್ಲಿ ಐದು ಥ್ರೋಗಳು ಜಾನ್ ಝೆಲೆಜ್ನಿ ಅವರ ಹೆಸರಿನಲ್ಲಿದೆ. ಅಲ್ಲದೆ ಝೆಲೆಜ್ನಿ 4 ಬಾರಿ ವಿಶ್ವ ದಾಖಲೆ ಮುರಿದ ಸಾಧನೆಯನ್ನೂ ಸಹ ಮಾಡಿದ್ದರು.
ಜಾನ್ ಝೆಲೆಜ್ನಿ 1996 ರಲ್ಲಿ ಜರ್ಮನಿಯಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬರೋಬ್ಬರಿ 98.48 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ವಿಶ್ವದಾಖಲೆ ಸೃಷ್ಟಿಸಿದ್ದರು. ಈವರೆಗೂ ಈ ದಾಖಲೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಾಗಿಲ್ಲ.ವಾಸ್ತವವಾಗಿ 2020 ರ ಒಲಿಂಪಿಕ್ಸ್ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು.
ಉಳಿದಂತೆ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಂಡಿದ್ದ ಜಾಕುಬ್ ವಾಡ್ಲೆಜ್ ಮತ್ತು ವಿಟೆಜ್ಸ್ಲಾವ್ ವೆಸೆಲಿ ಅವರಿಗೆ ತರಬೇತಿ ನೀಡಿದ್ದು, ಇದೇ ಜಾನ್ ಝೆಲೆಜ್ನಿ. ಇದಲ್ಲದೆ ಜಾನ್ ಝೆಲೆಜ್ನಿ, ಎರಡು ಬಾರಿಯ ಒಲಿಂಪಿಕ್ ಚಾಂಪಿಯನ್ ಮತ್ತು ಮೂರು ಬಾರಿ ವಿಶ್ವ ಚಾಂಪಿಯನ್ ಬಾರ್ಬೊರಾ ಸ್ಪೋಟಕೋವಾ ಅವರಿಗೂ ತರಬೇತಿ ನೀಡಿದ್ದಾರೆ.
ಜಾನ್ ಝೆಲೆಜ್ನಿ ಅವರನ್ನು ಕೋಚ್ ಆಗಿ ನೇಮಿಸಿಕೊಂಡ ಬಳಿಕ ಮಾತನಾಡಿರುವ ನೀರಜ್ ಚೋಪ್ರಾ, ನನ್ನ ಆರಂಭದ ದಿನಗಳಲ್ಲಿ ನನ್ನ ಮೇಲೆ ಝೆಲೆಜ್ನಿ ಅವರ ತಂತ್ರ ಮತ್ತು ನಿಖರತೆ ಸಾಕಷ್ಟು ಪ್ರಭಾವ ಬೀರಿತ್ತು. ಹೀಗಾಗಿ ನಾನು ಝೆಲೆಜ್ನಿ ಅವರ ಜಾವೆಲಿನ್ ಥ್ರೋ ವೀಡಿಯೊಗಳನ್ನು ವೀಕ್ಷಿಸಲು ಸಾಕಷ್ಟು ಸಮಯವನ್ನು ಕಳೆದಿದ್ದೇನೆ. ನಮ್ಮಿಬ್ಬರ ಎಸೆಯುವ ಶೈಲಿಗಳಲ್ಲಿ ಹೋಲಿಕೆ ಇರುವುದರಿಂದ ಅವರೊಂದಿಗೆ ಕೆಲಸ ಮಾಡುವುದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.