ಉಡುಪಿಯಲ್ಲಿ ಯೋಗ ಪ್ರಾಣಾಯಾಮ ಮತ್ತು ಧ್ಯಾನ ಶಿಬಿರಕ್ಕೆ ಚಾಲನೆ
ಉಡುಪಿ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಯೋಗ ಗುರು ಬಾಬಾ ರಾಮ್ ದೇವ್ ಜೀಯವರ ಮೂರು ದಿನಗಳ ಯೋಗ ಪ್ರಾಣಾಯಾಮ ಮತ್ತು ಧ್ಯಾನ ಶಿಬಿರವು ಇಂದು ಗುರುವಾರ ಬೆಳಿಗ್ಗೆ 5.30 ಕ್ಕೆ ಉದ್ಘಾಟನೆಗೊಂಡಿತು.
ಇದಕ್ಕೂ ಮೊದಲು ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಒಂದು ತಿಂಗಳ ಕಾಲ ಯೋಗ ನಿದ್ರೆಯಿಂದ ಭಗವಂತನನ್ನು ಎಬ್ಬಿಸುವ ಪಶ್ಚಿಮ ಜಾಗರ ಪೂಜೆಯಲ್ಲಿ ಬಾಬಾ ರಾಮದೇವ್ ರವರು ಪಾಲ್ಗೊಂಡಿದ್ದರು. ಶ್ರೀ ಕೃಷ್ಣ ಮಠದ ಗರ್ಭ ಗುಡಿಯ ಸುತ್ತಲೂ ದೀಪಗಳನ್ನು ಬೆಳಗಲಾಯಿತು. ಬಾಬಾ ರಾಮದೇವ್ ದೀಪವನ್ನು ಬೆಳಗಿಸಿ ದೀಪೋತ್ಸವ ಚಾಲನೆಯನ್ನು ನೀಡಿದರು. ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಶ್ರೀ ಕೃಷ್ಣನಿಗೆ ಪೂಜೆಯನ್ನು ಮಾಡಿದರು.
ಗರ್ಭಗುಡಿಯ ಸುತ್ತಲೂ ದೀಪದ ಬೆಳಕಿನಲ್ಲಿ ವಾದ್ಯ ಸೇವೆಗಳೊಂದಿಗೆ ಪಶ್ಚಿಮ ಜಾಗರ ಪೂಜೆಯು ವೈಭವದಿಂದ ನಡೆಯಿತು. ನಂತರ ರಾಜಾಂಗಣದಲ್ಲಿ ನಡೆದ ವಿಶೇಷ ಯೋಗ ಜ್ಞಾನ ಪ್ರಾಣ ಶಿಬಿರದಲ್ಲಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಬಾಬಾ ರಾಮದೇವ್ ರವರು ಪಾಲ್ಗೊಂಡು ಅಸಂಖ್ಯಾತ ಭಕ್ತರ ಉಪಸ್ಥಿತಿಯಲ್ಲಿ ಯೋಗಶಿಬಿರವನ್ನು ಮಾಡಿದರು .
ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಯೋಗಋಷಿ ಸ್ವಾಮಿ ರಾಮದೇವ್ ಜೀ ಮಹಾರಾಜ್ ರವರು ಭೇಟಿ ನೀಡಿದರು. ಪರ್ಯಾಯ ಪುತ್ತಿಗೆ ಮಠದ ಉಭಯ ಶ್ರೀಪಾದರು ಪೂರ್ಣಕುಂಭ ಸ್ವಾಗತ ಮಾಡಿ, ಬಾಬಾ ರಾಮದೇವ್ ರವರಿಗೆ ಶ್ರೀ ಕೃಷ್ಣ ಮುಖ್ಯಪ್ರಾಣ ಹಾಗೂ ಗರುಡ ದೇವರ ದರ್ಶನ ಮಾಡಿಸಿ ಶ್ರೀ ಕೃಷ್ಣನ ಪ್ರಸಾದ ನೀಡಿದರು. ನಂತರ ಗೀತಾನಂದಿರಕ್ಕೆ ಭೇಟಿ ನೀಡಿ ಪುತ್ತಿಗೆ ಶ್ರೀಪಾದರ ಕೋಟಿಗೀತಾ ಲೇಖನ ಯಜ್ಞದಲ್ಲಿ ಪಾಲ್ಗೊಂಡು ಧನ್ಯತಾ ಭಾವ ಹೊಂದಿದರು. ಇದೇ ಸಂದರ್ಭದಲ್ಲಿ ಪತಂಜಲಿಯ ಬಾಲಕೃಷ್ಣ ಆಚಾರ್ಯ ಇವರು, ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯರು ಉಪಸ್ಥಿತರಿದ್ದರು.