ಉಡುಪಿಯಲ್ಲಿ ಎನ್ ಕೌಂಟರ್: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಸಾವು....ಮಹಾ ಚುನಾವಣೆ: ಮತದಾರರು ಬೂತ್ಗಳಿಗೆ ತೆರಳಲು QR ಕೋಡ್ ಪರಿಚಯ...ನವೆಂಬರ್ 25ರಿಂದ ಸಂಸತ್ ಚಳಿಗಾಲದ ಅಧಿವೇಶನ: ಭಾನುವಾರ ಸರ್ವಪಕ್ಷ ಸಭೆ...
IND vs NZ: ಭರ್ಜರಿ ಜಯದೊಂದಿಗೆ ಟೀಮ್ ಇಂಡಿಯಾದ ಕಿವಿ ಹಿಂಡಿದ ಕಿವೀಸ್ ಪಡೆ
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ನಾಯಕ ನಿರ್ಧಾರ ತಪ್ಪು ಎಂಬುದನ್ನು ಮೊದಲ 10 ಓವರ್‌ಗಳಲ್ಲೇ ಕಿವೀಸ್ ಬೌಲರ್‌ಗಳು ನಿರೂಪಿಸಿದ್ದರು. ಮೊದಲ ಇನಿಂಗ್ಸ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ (2) ಕ್ಲೀನ್ ಬೌಲ್ಡ್ ಮಾಡುವ ಮೂಲಕ ಟಿಮ್ ಸೌಥಿ ನ್ಯೂಝಿಲೆಂಡ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ (0) ಒರೋಕ್ ಎಸೆತದಲ್ಲಿ ಕ್ಯಾಚ್ ನೀಡಿದರು. ಆ ಬಳಿಕ ಬಂದ ಸರ್ಫರಾಝ್ ಖಾನ್ (0) ಮ್ಯಾಟ್ ಹೆನ್ರಿ ಎಸೆತದಲ್ಲಿ ಕ್ಯಾಚಿತ್ತು ನಿರ್ಗಮಿಸಿದರು.
ಇದಾಗ್ಯೂ ಒಂದೆಡೆ ಕ್ರೀಸ್ ಕಚ್ಚಿ ಆಡಿದ ಯಶಸ್ವಿ ಜೈಸ್ವಾಲ್ 63 ಎಸೆತಗಳನ್ನು ಎದುರಿಸಿ 13 ರನ್ ಕಲೆಹಾಕಿದರು. ಆದರೆ ಒರೋಕ್ ಎಸೆತದಲ್ಲಿ ಅಜಾಝ್ ಪಟೇಲ್ ಹಿಡಿದ ಅದ್ಭುತ ಕ್ಯಾಚ್ನಿಂದಾಗಿ ಜೈಸ್ವಾಲ್ ಇನಿಂಗ್ಸ್ ಕೂಡ ಅಂತ್ಯಗೊಂಡಿತು. ಆ ಬಳಿಕ ಬಂದ ಕೆಎಲ್ ರಾಹುಲ್ (0) ಹಾಗೂ ರವೀಂದ್ರ ಜಡೇಜಾ (0) ಸೊನ್ನೆಯೊಂದಿಗೆ ಪೆವಿಲಿಯನ್ಗೆ ಹಿಂತಿರುಗಿದರು. ಇನ್ನು ರಿಷಭ್ ಪಂತ್ 20 ರನ್ ಬಾರಿಸಿ ಮ್ಯಾಟ್ ಹೆನ್ರಿ ಎಸೆತದಲ್ಲಿ ಕ್ಯಾಚ್ ನೀಡಿದರು. ಇದರ ಬೆನ್ನಲ್ಲೇ ರವಿಚಂದ್ರನ್ ಅಶ್ವಿನ್ (0) ಹಾಗೂ ಜಸ್ಪ್ರೀತ್ ಬುಮ್ರಾ (2) ಔಟಾದರು.
ಕೊನೆಯ ವಿಕೆಟ್ಗೆ ಜೊತೆಗೂಡಿದ ಮೊಹಮ್ಮದ್ ಸಿರಾಜ್ ಹಾಗೂ ಕುಲ್ದೀಪ್ ಯಾದವ್ 6 ರನ್ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ ಹೆನ್ರಿ ಎಸೆತದಲ್ಲಿ ಕ್ಯಾಚ್ ನೀಡಿ ಕುಲ್ದೀಪ್ ಯಾದವ್ (2) ಇನಿಂಗ್ಸ್ ಅಂತ್ಯಗೊಳಿಸಿದರು. ಈ ಮೂಲಕ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ ಕೇವಲ 46 ರನ್ಗಳಿಗೆ ಆಲೌಟ್ ಆಯಿತು.
ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ನ್ಯೂಝಿಲೆಂಡ್ ಪರ ಡೆವೊನ್ ಕಾನ್ವೆ 91 ರನ್ ಬಾರಿಸಿದರೆ, ರಚಿನ್ ರವೀಂದ್ರ 134 ರನ್ ಚಚ್ಚಿದರು. ಈ ಮೂಲಕ ನ್ಯೂಝಿಲೆಂಡ್ ತಂಡವು ಪ್ರಥಮ ಇನಿಂಗ್ಸ್ನಲ್ಲಿ 402 ರನ್ ಕಲೆಹಾಕಿ ಆಲೌಟ್ ಆಯಿತು.
356 ರನ್ಗಳ ಹಿನ್ನಡೆ:
ಪ್ರಥಮ ಇನಿಂಗ್ಸ್ನಲ್ಲಿ 356 ರನ್ಗಳ ಹಿನ್ನಡೆ ಅನುಭವಿಸಿದ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕನಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ 35 ರನ್ ಬಾರಿಸಿದರೆ, ರೋಹಿತ್ ಶರ್ಮಾ (52) ಅರ್ಧಶತಕ ಸಿಡಿಸಿದರು. ಇನ್ನು ವಿರಾಟ್ ಕೊಹ್ಲಿ 70 ರನ್ಗಳ ಕೊಡುಗೆ ನೀಡಿದರು.
ಮತ್ತೊಂದೆಡೆ ಶ್ರೇಷ್ಠ ಪ್ರದರ್ಶನ ನೀಡಿದ ಸರ್ಫರಾಝ್ ಖಾನ್ 110 ಎಸೆತಗಳಲ್ಲಿ ಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಅಲ್ಲದೆ 195 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 18 ಫೋರ್ಗಳೊಂದಿಗೆ 150 ರನ್ ಕಲೆಹಾಕಿದರು. ಸರ್ಫರಾಝ್ಗೆ ಉತ್ತಮ ಸಾಥ್ ನೀಡಿದ ರಿಷಭ್ ಪಂತ್ 105 ಎಸೆತಗಳಲ್ಲಿ 99 ರನ್ ಬಾರಿಸಿ ಕೇವಲ ಒಂದು ರನ್ನಿಂದ ಶತಕ ವಂಚಿತರಾದರು.
ಇದಾಗ್ಯೂ ಪಂತ್ ಹಾಗೂ ಸರ್ಫರಾಝ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ 400 ರನ್ಗಳ ಗಡಿದಾಟಿತು. ಆದರೆ ಇವರಿಬ್ಬರ ನಿರ್ಗಮನದ ಬಳಿಕ ದಿಢೀರ್ ಕುಸಿತಕ್ಕೊಳಗಾದ ಭಾರತ ತಂಡವು ದ್ವಿತೀಯ ಇನಿಂಗ್ಸ್ ಅನ್ನು 462 ರನ್ಗಳೊಂದಿಗೆ ಅಂತ್ಯಗೊಳಿಸಿತು.
107 ರನ್ಗಳ ಗುರಿ:
ಮೊದಲ ಇನಿಂಗ್ಸ್ನ ಮುನ್ನಡೆಯೊಂದಿಗೆ ನ್ಯೂಝಿಲೆಂಡ್ ತಂಡಕ್ಕೆ ಗೆಲ್ಲಲು ಕೇವಲ 107 ರನ್ಗಳ ಅವಶ್ಯಕತೆಯಿತ್ತು. ಈ ಸುಲಭ ಗುರಿಯನ್ನು ಬೆನ್ನತ್ತಲಾರಂಭಿಸಿದ ಕಿವೀಸ್ ಪಡೆಗೆ ಬುಮ್ರಾ ಆರಂಭಿಕ ಆಘಾತ ನೀಡಿದ್ದರು. ಇದಾಗ್ಯೂ ಎಚ್ಚರಿಕೆಯ ಬ್ಯಾಟಿಂಗ್ಗೆ ಒತ್ತು ನೀಡಿದ ನ್ಯೂಝಿಲೆಂಡ್ ಬ್ಯಾಟರ್ಗಳು ಒಂದೊಂದು ರನ್ ಕಲೆಹಾಕುತ್ತಾ ಗುರಿಯತ್ತ ಸಾಗಿದರು.
ಅಂತಿಮವಾಗಿ 2 ವಿಕೆಟ್ ಕಳೆದುಕೊಂಡು 107 ರನ್ಗಳ ಗುರಿ ಮುಟ್ಟುವ ಮೂಲಕ ನ್ಯೂಝಿಲೆಂಡ್ ತಂಡವು 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ನ್ಯೂಝಿಲೆಂಡ್ 1-0 ಅಂತರದಿಂದ ಮುನ್ನಡೆ ಪಡೆದುಕೊಂಡಿದೆ.