ಉಡುಪಿಯಲ್ಲಿ ಎನ್ ಕೌಂಟರ್: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಸಾವು....ಮಹಾ ಚುನಾವಣೆ: ಮತದಾರರು ಬೂತ್‌ಗಳಿಗೆ ತೆರಳಲು QR ಕೋಡ್‌ ಪರಿಚಯ...ನವೆಂಬರ್ 25ರಿಂದ ಸಂಸತ್ ಚಳಿಗಾಲದ ಅಧಿವೇಶನ: ಭಾನುವಾರ ಸರ್ವಪಕ್ಷ ಸಭೆ...

ಕೊನೆಗೂ Hamas ಮುಖ್ಯಸ್ಥನ ಹೊಡೆದುರುಳಿಸಿದ ಇಸ್ರೇಲ್ ಸೇನೆ; ಇಷ್ಟಕ್ಕೂ ಯಾರು ಈ Yahya Sinwar? ಯಾಕೀತ ‘MOST WANTED’ ಆಗಿದ್ದ?

ಟೆಲ್ ಅವೀವ್: ಅಕ್ಟೋಬರ್ 7ರಂದು ಇಸ್ರೇಲಿಗರ ಮೇಲಿನ ದಾಳಿಯ ರೂವಾರಿ, ಹಮಾಸ್ ಉಗ್ರ ಸಂಘಟನೆ ಮುಖ್ಯಸ್ಥ ಯಾಹ್ಯಾ ಸಿನ್ವಾರ್  ಕೊನೆಗೂ ಇಸ್ರೇಲ್ ಸೇನೆ ಹೊಡೆದುರುಳಿಸಿದ್ದು, ಇಡೀ ಇಸ್ರೇಲ್ ಇದೀಗ ಸಂಭ್ರಮಾಚರಣೆಯಲ್ಲಿ ತೊಡಗಿದೆ.

ಗಾಜಾದಲ್ಲಿ ನಡೆದ ದಾಳಿಯಲ್ಲಿ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಅವರನ್ನು ಕೊಂದಿರುವುದಾಗಿ ಇಸ್ರೇಲ್ ಸೇನೆ ಗುರುವಾರ ಹೇಳಿಕೊಂಡಿದೆ. ಇದಕ್ಕೆ ಇಂಬು ನೀಡುವಂತೆ ಇಸ್ರೇಲ್ ಸೇನೆ ಡ್ರೋನ್ ವಿಡಿಯೋ ಕೂಡ ಬಿಡುಗಡೆ ಮಾಡಿದ್ದು, Yahya Sinwar ಸಿನ್ವಾರ್ ನನ್ನು ಹೊಡೆದುರುಳಿಸಿರುವುದಾಗಿ ಹೇಳಿದೆ.

ತಲೆಗೆ ಗುಂಡೇಟು ಬಿದ್ದು ಕೈ ಕಟ್ ಆದ ಸ್ಥಿತಿಯಲ್ಲಿ Yahya Sinwar ಪತ್ತೆಯಾಗಿದ್ದು, ಇಸ್ರೇಲ್ ಸೇನಾಪಡೆಗಳು ಆತನ ಮೃತದೇಹವನ್ನು ಹೊತ್ತು ಸಾಗಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಒಂದೆಡೆ Yahya Sinwar ಹತ್ಯೆಯನ್ನು ಇಡೀ ಇಸ್ರೇಲಿಗರು ಸಂಭ್ರಮಿಸುತ್ತಿದ್ದರೆ ಮತ್ತೊಂದೆಡೆ ಹಮಾಸ್ ಕುರಿತು ಸಾಫ್ಟ್ ಕಾರ್ನರ್ ಹೊಂದಿರುವ ಜಾಗತಿಕ ನಾಯಕರು ಯಾಹ್ಯಾ ಸಿನ್ವಾರ್ ಸಾವಿಗೆ ಆಘಾತ ವ್ಯಕ್ತಪಡಿಸಿದ್ದಾರೆ.

ಇಸ್ರೇಲ್ ಮೋಸ್ಟ್ ವಾಂಟೆಡ್ ಆಗಿದ್ದ ಯಾಹ್ಯಾ!

ಯಾಹ್ಯಾ ಸಿನ್ವಾರ್ 2023ರಲ್ಲಿ ಇಸ್ರೇಲ್ ಮೇಲೆ ನಡೆದ ಭಯಾನಕ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ. ಈ ಹಿಂದೆ ಇರಾನ್‌ಗೆ ಭೇಟಿ ನೀಡಿದ್ದ ಇಸ್ರೇಲ್‌ನ ಮಾಜಿ ಮುಖ್ಯಸ್ಥ ಇಸ್ಮಾಯಿಲ್ ಹನಿಯೆ ಅವರನ್ನು ಹತ್ಯೆ ಮಾಡಿದ ನಂತರ ಇದೇ ಯಾಹ್ಯಾ ಸಿನ್ವಾರ್ ನನ್ನು ಹಮಾಸ್‌ನ ಉನ್ನತ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಇದೇ ಯಾಹ್ಯಾ ತನ್ನ ರಾಜಿಯಾಗದ ನಿಲುವು ಮತ್ತು ಇಸ್ರೇಲಿ ಸಮಾಜ ಮತ್ತು ಅದರ ದೇಶೀಯ ರಾಜಕೀಯದ ಆಳವಾದ ಜ್ಞಾನಕ್ಕಾಗಿ ಇಸ್ರೇಲ್‌ನ ಅತ್ಯಂತ ಭಯಾನಕ ಶತ್ರುಗಳಲ್ಲಿ ಪ್ರಮುಖನೆಂದು ಪರಿಗಣಿಸಲ್ಪಟ್ಟಿದ್ದ.

ಈ ಹಿಂದೆ ಇಸ್ರೇಲ್ ಮೇಲೆ ಅಕ್ಟೋಬರ್ 7ರಂದು ನಡೆದ ಕಂಡುಕೇಳರಿಯದ ದಾಳಿಯಲ್ಲಿ ಸುಮಾರು 1,200 ಇಸ್ರೇಲಿಗರು ಪ್ರಾಣ ಕಳೆದುಕೊಂಡಿದ್ದರು. ಅಲ್ಲದೆ ಸುಮಾರು 250 ಮಹಿಳೆಯರನ್ನು ನಾಗರಿಕರನ್ನು ಅಪಹರಿಸಲಾಗಿತ್ತು. ಈ ಎಲ್ಲ ಸಂಚಿನ ಹಿಂದೆ ಇದೇ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಮಾಸ್ಟರ್ ಮೈಂಡ್ ಆಗಿದ್ದ ಎಂದು ಇಸ್ರೇಲ್ ಸೇನೆ ಹೇಳಿದೆ. ಆಂದಿನ ಇಸ್ರೇಲ್ ಮೇಲಿನ ದಾಳಿ ಬಳಿಕ ಇಸ್ರೇಲ್ ಸೇನೆ ನಡೆಸಿದ ಪ್ರತಿದಾಳಿಯಲ್ಲಿ ಈ ವರೆಗೂ 17,000 ಕ್ಕೂ ಹೆಚ್ಚು ಮಕ್ಕಳು ಮತ್ತು ಕನಿಷ್ಠ 11,400 ಮಹಿಳೆಯರು ಸೇರಿದಂತೆ 42,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯರು ಸಾವನ್ನಪ್ಪಿದ್ದಾರೆ.

ಯಾರು ಈ ಯಾಹ್ಯಾ ಸಿನ್ವಾರ್?

1948ರಲ್ಲಿ ಇಸ್ರೇಲ್ ರಾಷ್ಟ್ರದ ರಚನೆಯ ಸುತ್ತಲಿನ ಪ್ಯಾಲೆಸ್ಟೀನಿಯರ ವಿರುದ್ಧದ ದಾಳಿ ವೇಳೆ ಹಲವು ಮುಸ್ಲಿಂ ಕುಟುಂಬಗಳು ಪಲಾಯನಗೊಂಡಿದ್ದವು. ಅಂತಹ ಕುಟುಂಬಗಳು ಗಾಜಾದ ಖಾನ್ ಯೂನಿಸ್‌ನಲ್ಲಿರುವ ನಿರಾಶ್ರಿತರ ಶಿಬಿರಕ್ಕೆ ಸ್ಥಳಾಂತರಗೊಂಡಿದ್ದವು. ಇದೇ ಪ್ರದೇಶದ ಕುಟುಂಬವೊಂದರಲ್ಲಿ 1962ರಲ್ಲಿ ಈ ಯಾಹ್ಯಾ ಸಿನ್ವಾರ್ ಜನಿಸಿದ್ದ.

ಸಿನ್ವಾರ್ 1980 ರ ದಶಕದ ಆರಂಭದಲ್ಲಿ, ಹಮಾಸ್ ರಚನೆಗೂ ಮೊದಲು, ಗಾಜಾದಲ್ಲಿನ ಇಸ್ಲಾಮಿಕ್ ವಿಶ್ವವಿದ್ಯಾಲಯದಲ್ಲಿ ಆಕ್ರಮಣ-ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಇಸ್ರೇಲ್ ಸೇನೆ ಈತನನ್ನು ಪದೇ ಪದೇ ಬಂಧನಕ್ಕೊಳಪಡಿಸಿತ್ತು. ಪದವಿಯ ನಂತರ, ಆತ ಇಸ್ರೇಲ್ ವಿರುದ್ಧ ಸಶಸ್ತ್ರ ಪ್ರತಿರೋಧವನ್ನು ತೆಗೆದುಕೊಳ್ಳಲು ಹೋರಾಟಗಾರರ ಜಾಲವನ್ನು ಸ್ಥಾಪಿಸಲು ಸಹಾಯ ಮಾಡಿದ. ಈ ಗುಂಪು ನಂತರ ‘ಕಸ್ಸಾಮ್ ಬ್ರಿಗೇಡ್ಸ್’ ಎಂದು ಕರೆಯಲ್ಪಡುವ ಇಜ್ ಅದ್-ದಿನ್ ಅಲ್-ಕಸ್ಸಾಮ್ ಹೆಸರಿನ ಹಮಾಸ್‌ನ ಮಿಲಿಟರಿ ವಿಭಾಗವಾಯಿತು.

1987 ರಲ್ಲಿ ಶೇಖ್ ಅಹ್ಮದ್ ಯಾಸಿನ್ ಹಮಾಸ್ ಸಂಘಟನೆಯನ್ನು ಸ್ಥಾಪಿಸಿದ ನಂತರ ಯಾಹ್ಯಾ ಸಿನ್ವಾರ್ ಹಮಾಸ್ ಸಂಘಟನೆಗೆ ಸೇರ್ಪಡೆಯಾಗಿದ್ದ. 1988ರಲ್ಲಿ, ಸಿನ್ವಾರ್ ಇಬ್ಬರು ಇಸ್ರೇಲಿ ಸೈನಿಕರು ಮತ್ತು ನಾಲ್ಕು ಶಂಕಿತ ಪ್ಯಾಲೆಸ್ಟೀನಿಯನ್ ಗೂಢಚಾರರನ್ನು ಕೊಂದ ಆರೋಪದಲ್ಲಿ ಮತ್ತೆ ಇಸ್ರೇಲ್ ಸೇನೆಯಿಂದ ಬಂಧನಕ್ಕೊಳಗಾಗಿದ್ದ. ಅಂದು ಆತನಿಗೆ ನಾಲ್ಕು ಜೀವಾವಧಿ ಶಿಕ್ಷೆಯನ್ನು (426 ವರ್ಷಗಳಿಗೆ ಸಮಾನ) ಜೈಲಿನಲ್ಲಿ ವಿಧಿಸಲಾಗಿತ್ತು. ಬಳಿಕ ನಡೆದ ರಾಜಕೀಯ ಬಣಗಳ ಮೇಲಾಟದಿಂದಾಗಿ ಸಿನ್ವಾರ್ ಬಿಡುಗಡೆಯಾಗಿದ್ದ. 2011ರಲ್ಲಿ ಹಮಾಸ್ ಪಡೆಗಳ ವಶದಲ್ಲಿದ್ದ ಇಸ್ರೇಲಿ ಸೈನಿಕರ ಬಿಡುಗಡೆಗಾಗಿ ಯಾಹ್ಯಾ ಸೇರಿದಂತೆ ಸುಮಾರು 1,000 ಇತರ ಕೈದಿಗಳನ್ನು ಬಿಡುಗಡೆ ಮಾಡಲಾಗಿತ್ತು.

23 ವರ್ಷ ಜೈಲಿನಲ್ಲಿದ್ದರೂ ಇಸ್ರೇಲ್ ವಿರುದ್ಧ ಬೆಂಕಿ ಉಗುಳುತ್ತಿದ್ದ

ಜೈಲಿನಿಂದ ಬಿಡುಗಡೆಯಾದ ಬಳಿಕ ಸಾವಿರಾರು ಯುವಕರನ್ನು ಹಮಾಸ್ ಸಂಘಟನೆಯತ್ತ ಆಕರ್ಷಿಸಲು ಮುಂದಾಗಿದ್ದ. ಬರೊಬ್ಬರಿ 23 ವರ್ಷ ಜೈಲಿನಲ್ಲಿದ್ದ ಯಾಹ್ಯಾ ಹೀಬ್ರೂ ಭಾಷೆಯನ್ನು ಕಲಿತು ಇಸ್ರೇಲಿ ಸಮಾಜ ಮತ್ತು ರಾಜಕೀಯವನ್ನು ಅಧ್ಯಯನ ಮಾಡಿದ್ದ. ತನ್ನ ಆಕರ್ಷಕ ನಡೆ ಮಾತುಗಳಿಂದ ಸಹ ಕೈದಿಗಳನ್ನು ತನ್ನತ್ತ ಸೆಳೆಯುತ್ತಿದ್ದ.

ಹೀಗೆ ಜೈಲಿನಲ್ಲಿಯೇ ಸಿನ್ವಾರ್ ಹಮಾಸ್ ಗಾಗಿ ಕೆಲಸ ಮಾಡುವ ಒಂದಷ್ಟು ಪಡೆಗಳನ್ನು ನಿರ್ಮಿಸಿಕೊಂಡಿದ್ದ. ಬಿಡುಗಡೆಯಾದ ಒಂದು ವರ್ಷದ ನಂತರ, 2012 ರಲ್ಲಿ, ಸಿನ್ವಾರ್ ಅವರು ಹಮಾಸ್‌ನ ರಾಜಕೀಯ ಬ್ಯೂರೋಗೆ ಆಯ್ಕೆಯಾದ. 2014 ರಲ್ಲಿ ಗಾಜಾದ ಮೇಲೆ ಇಸ್ರೇಲ್‌ನ ಏಳು ವಾರಗಳ ಅವಧಿಯ ದಾಳಿಯ ಸಮಯದಲ್ಲಿ ಸಿನ್ವಾರ್ ಪ್ರಮುಖ ರಾಜಕೀಯ ಮತ್ತು ಮಿಲಿಟರಿ ಪಾತ್ರವನ್ನು ವಹಿಸಿದ. ಮುಂದಿನ ವರ್ಷ ಅಮೆರಿಕ ಈತನನ್ನು “ವಿಶೇಷವಾಗಿ ಗೊತ್ತುಪಡಿಸಿದ ಜಾಗತಿಕ ಭಯೋತ್ಪಾದಕ” ಎಂದು ಘೋಷಿಸಿತು.

2017 ರಲ್ಲಿ, ಅವರು ಇಸ್ಮಾಯಿಲ್ ಹನಿಯೆಹ್ ಅವರ ನಂತರ ಗಾಜಾದಲ್ಲಿ ಹಮಾಸ್‌ನ ರಾಜಕೀಯ ಬ್ಯೂರೋದ ಮುಖ್ಯಸ್ಥನಾದ. ಲೆಬನಾನ್‌ನ ಹಿಜ್ಬುಲ್ಲಾ ಸೇರಿದಂತೆ ಇರಾನ್ ಮತ್ತು ಅದರ ಮಿತ್ರರಾಷ್ಟ್ರಗಳೊಂದಿಗೆ ಗುಂಪನ್ನು ಮರುಹೊಂದಿಸಲು ಸಿನ್ವಾರ್ ಹನಿಯೆಹ್ ಜೊತೆ ಕೆಲಸ ಮಾಡಿದ. ತನ್ನ ಪ್ರತೀ ಸಾರ್ವಜನಿಕ ಭಾಷಣದಲ್ಲೂ ಇಸ್ರೇಲ್ ವಿರುದ್ಧ ಬೆಂಕಿ ಉಗುಳುತ್ತಿದ್ದ ಯಾಹ್ಯಾ ಸಿನ್ವಾರ್, ಇಸ್ರೇಲ್ ನನ್ನು ಕೊನೆಗೊಳಿಸಲು ಕರೆ ನೀಡುತ್ತಿದ್ದ.

No Comments

Leave A Comment