ಅತ್ಯಾಚಾರ ಪ್ರಕರಣ: BJP ಶಾಸಕ ಮುನಿರತ್ನಗೆ ಕೊನೆಗೂ ಜಾಮೀನು
ಬೆಂಗಳೂರು: ದಲಿತ ಸಮುದಾಯದ ಗುತ್ತಿಗೆದಾರನಿಗೆ ಬೆದರಿಕೆ, ಜಾತಿನಿಂದನೆ ಪ್ರಕರಣದಲ್ಲಿ ಜೈಲು ಸೇರಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಬಿಜೆಪಿ ಶಾಸಕ ಮುನಿರತ್ನಗೆ ಇದೀಗ ಅತ್ಯಾಚಾರ ಪ್ರಕರಣದಲ್ಲೂ ಬಿಗ್ ರಿಲೀಫ್ ಸಿಕ್ಕಿದೆ.
ರಾಮನಗರದ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣದಲ್ಲಿ ಮುನಿರತ್ನಗೆ ಕೋರ್ಟ್ ಜಾಮೀನು ನೀಡಿದ್ದು, ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮುನಿರತ್ನ ಅವರಿಗೆ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಮಂಗಳವಾರ ಕಾಯ್ದಿರಿಸಿದ್ದ ತೀರ್ಪನ್ನು ಪ್ರಕಟಿಸಿದ ಬೆಂಗಳೂರು ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು ಮುನಿರತ್ನಗೆ ಷರತ್ತುಬದ್ದ ಜಾಮೀನು ಮಂಜೂರು ಮಾಡಿ ಆದೇಶ ನೀಡಿದ್ದಾರೆ.
ಪೊಲೀಸರ ತನಿಖೆಗೆ ಸಹಕಾರ ನೀಡುವುದು, ಸಾಕ್ಷಿಗಳನ್ನು ನಾಶಪಡಿಸದಿರುವುದು, ಸಾಕ್ಷ್ಯಾಧಾರರ ಮೇಲೆ ಪ್ರಭಾವ ಬೀರದಿರುವುದು, ಇಬ್ಬರ ಶ್ಯೂರಿಟಿ ಮೇಲೆ ಜಾಮೀನನ್ನು ಮಂಜೂರು ಮಾಡಿದ್ದಾರೆ.
ಅಂದಹಾಗೆ ರಾಮನಗರ ಜಿಲ್ಲೆಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಆಧಾರದ ಮೇಲೆ ಎಸ್‌ಐಟಿ ಅಧಿಕಾರಿಗಳು ಮುನಿರತ್ನ ಅವರನ್ನು ಬಂಧಿಸಿದ್ದರು. ತಮನ್ನು ಮುನಿರತ್ನ ಅವರು ಅಧಿಕಾರ ದುರುಪಯೋಗಪಡಿಸಿಕೊಂಡು ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತ ಮಹಿಳೆಯೊಬ್ಬರು ದೂರು ನೀಡಿದ್ದರು.