ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಉಡುಪಿ ಹಾಗೂ ವಿಶ್ವದಾದ್ಯಂತ ವಿಶ್ವಗುರು ಮಧ್ವ ಸ್ಮರಣೆ
ಉಡುಪಿ: ದ್ವೈತ ಮತ ಪ್ರತಿಪಾದಕ, ಉಡುಪಿ ಶ್ರೀಕೃಷ್ಣ ಪ್ರತಿಷ್ಠಾಪಕರಾದ ಜಗದ್ಗುರು ಶ್ರೀ ಮಧ್ವಾಚಾರ್ಯರ ಜಯಂತ್ಯುತ್ಸವವನ್ನು ವಿಜಯದಶಮಿ ಪರ್ವಕಾಲದಲ್ಲಿ ಭಾನುವಾರ ಆಚರಿಸಲಾಗಿದ್ದು, ಆ ಮೂಲಕ ವಿಶ್ವದಾದ್ಯಂತ ವಿಶ್ವಗುರು ಆಚಾರ್ಯ ಮಧ್ವರ ಸ್ಮರಣೆ ನಡೆಸಲಾಯಿತು.
ಉಡುಪಿಯಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥತೀರ್ಥ ಶ್ರೀಪಾದರ ನೇತೃತ್ವದಲ್ಲಿ ಉಡುಪಿಯಲ್ಲಿ ಮಧ್ವ ಜಯಂತಿಯನ್ನು ವೈಭವದಿಂದ ಆಚರಿಸಲಾಯಿತು.
ಆಚಾರ್ಯ ಮಧ್ವರು ಅದೃಶ್ಯರಾದ ಶ್ರೀ ಅನಂತೇಶ್ವರ ದೇವಸ್ಥಾನದ ಆಚಾರ್ಯ ಮಧ್ವ ಸನ್ನಿಧಿಯಲ್ಲಿ ನೂರು ಮಂದಿ ವೈದಿಕರಿಂದ ತ್ರಿಶತ ಶ್ರೀವಾಯುಸ್ತುತಿ ಪಾರಾಯಣ ಹಾಗೂ ಪುಷ್ಪಾರ್ಚನೆ ನಡೆಯಿತು. ಪುತ್ತಿಗೆ ಉಭಯ ಶ್ರೀಪಾದರು ವಿಶೇಷ ಪೂಜೆ ನಡೆಸಿದರು.
ಸಂಜೆ ರಥಬೀದಿಯಲ್ಲಿ ಆಚಾರ್ಯ ಮಧ್ವರ ಭಾವಚಿತ್ರ ಹಾಗೂ ಗ್ರಂಥಗಳ ರಥೋತ್ಸವ ನಡೆಯಿತು.
ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಆಚಾರ್ಯ ಮಧ್ವರ ಕುರಿತು ಉಪನ್ಯಾಸ ನೀಡಿದರು. ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.