ಉಡುಪಿಯಲ್ಲಿ ಎನ್ ಕೌಂಟರ್: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಸಾವು....ಮಹಾ ಚುನಾವಣೆ: ಮತದಾರರು ಬೂತ್ಗಳಿಗೆ ತೆರಳಲು QR ಕೋಡ್ ಪರಿಚಯ...ನವೆಂಬರ್ 25ರಿಂದ ಸಂಸತ್ ಚಳಿಗಾಲದ ಅಧಿವೇಶನ: ಭಾನುವಾರ ಸರ್ವಪಕ್ಷ ಸಭೆ...
ಮಂಗಳೂರು: ಮಾಜಿ ಶಾಸಕ ಮೊಹಿಯುದ್ದೀನ್ ಬಾವ ಸೋದರ ಮುಮ್ತಾಜ್ ಅಲಿ ನಾಪತ್ತೆ, ಕಾರು ಕೂಳೂರು ಸೇತುವೆ ಬಳಿ ಪತ್ತೆ
ಮಂಗಳೂರು: ಮಾಜಿ ಶಾಸಕ ಮೊಹಿಯುದ್ದೀನ್ ಬಾವ ಸೋದರ ಮುಮ್ತಾಜ್ ಅಲಿಯ ಕಾರು ಕೂಳೂರು ಸೇತುವೆ ಬಳಿ ಇಂದು ಭಾನುವಾರ ಬೆಳಗ್ಗೆ ಪತ್ತೆಯಾಗಿದೆ.
ಮುಮ್ತಾಜ್ ನಾಪತ್ತೆಯಾಗಿದ್ದು, ಅವರು ನದಿಗೆ ಬಿದ್ದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಹೀಗಾಗಿ ನದಿಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ.
ಕೂಳೂರು ನದಿಯ ಸೇತುವೆ ಬಳಿ ಕಪ್ಪು ಬಣ್ಣದ ಬಿಎಂಡಬ್ಲ್ಯು ಕಾರು ಪತ್ತೆಯಾಗಿದೆ. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಅದು ಮುಮ್ತಾಜ್ ಅಲಿ ಅವರದ್ದು ಎಂದು ಗೊತ್ತಾಗಿದೆ. ಅವರಿಗಾಗಿ ಅಗ್ನಿಶಾಮಕ ಮತ್ತು ತುರ್ತು ಸೇವಾ ತಂಡದವರು ಹಾಗೂ ನಮ್ಮ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಪಣಂಬೂರು ಠಾಣೆ ಪೊಲೀಸರು ತಿಳಿಸಿದ್ದಾರೆ.
ಕಾರು ಸೇತುವೆಯ ಮಧ್ಯಭಾಗದಲ್ಲಿ ನಿಂತಿದೆ. ವಾಹನ ಸಂಚಾರಕ್ಕೆ ಅಡಚಣೆಯಾಗಬಾರದೆಂದು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು ಅಪಘಾತಕ್ಕೆ ಈಡಾಗಿದೆ ಎನ್ನಬಹುದು.
ಮಂಗಳೂರು ಉತ್ತರ ಭಾಗದ ಮಾಜಿ ಶಾಸಕ ಮೊಹಿಯುದ್ದೀನ್ ಬಾವ, ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುಮ್ತಾಜ್ ಅಲಿ ಅವರು ಇಂದು ನಸುಕಿನ ಜಾವ 3 ಗಂಟೆಗೆ ಮನೆಯಿಂದ ಹೊರಟಿದ್ದರು. 5 ಗಂಟೆ ವೇಳೆಗೆ ಕೂಳೂರು ಸೇತುವೆ ಬಳಿ ಕಾರು ಮಾತ್ರ ಪತ್ತೆಯಾಗಿದೆ.
ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಇಂದು ಮುಂಜಾನೆ ನಮಗೆ ಮಾಹಿತಿ ಬಂದಿದ್ದು, ಕುಳೂರು ಸೇತುವೆ ಬಳಿ ಉದ್ಯಮಿ ಮುಮ್ತಾಜ್ ಅಲಿ ಅವರ ವಾಹನ ಪತ್ತೆಯಾಗಿದೆ. ಅವರು ಸೇತುವೆಯಿಂದ ಜಿಗಿದಿರಬಹುದು. ಸ್ಥಳೀಯ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ.
ಪ್ರಾಥಮಿಕ ತನಿಖೆಯಂತೆ, 3 ಗಂಟೆ ಸುಮಾರಿಗೆ, ಅವರು ಮನೆಯಿಂದ ಹೊರಟು 5 ಗಂಟೆ ಸುಮಾರಿಗೆ ಕೂಳೂರು ಸೇತುವೆ ಬಳಿ ಬಂದಿರಬಹುದು ಎಂದು ಅವರ ಪುತ್ರಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಂದರು ಕಾವಲು ಪಡೆ ತಂಡಗಳು ನದಿಯಲ್ಲಿ ಶೋಧ ನಡೆಸುತ್ತಿವೆ. ಅವರು ನದಿಗೆ ಹಾರಿದ್ದಾರೆಯೇ ಅಥವಾ ಬೇರೆಡೆಗೆ ಹೋಗಿದ್ದಾರೆಯೇ, ಏನು ಘಟನೆ ನಡೆಯುತ್ತಿದೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.