ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...

ಚೀನಾ ಬೆಳ್ಳುಳ್ಳಿ: ಶಿವಮೊಗ್ಗ ಆಯ್ತು, ಈಗ ಉಡುಪಿಯಲ್ಲೂ ಹಾವಳಿ, ಎಪಿಎಂಸಿ ಮಾರುಕಟ್ಟೆಯಲ್ಲಿ 5 ಕ್ವಿಂಟಲ್ ಚೀನಾ ಬೆಳ್ಳುಳ್ಳಿ ವಶಕ್ಕೆ

ಉಡುಪಿ, ಅಕ್ಟೋಬರ್ 2: ಪ್ರಪಂಚದಲ್ಲಿ ಚೀನಾದಿಂದ ಯಾವುದೇ ವಸ್ತು ಬಂದರೂ ಅದಕ್ಕೆ ಗ್ಯಾರಂಟಿ ಇಲ್ಲ ಅಥವಾ ಅದು ಅಸಲಿ ಅಲ್ಲ ಎನ್ನುವ ಮಾತಿದೆ. ಈ ಹಿಂದೆ ಚೀನಾದಿಂದ ಪ್ಲಾಸ್ಟಿಕ್ ಅಕ್ಕಿ ಬರುತ್ತಿದೆ ಎನ್ನುವ ಸುದ್ದಿ ದೊಡ್ಡ ಮಟ್ಟದ ಆತಂಕಕ್ಕೆ ಕಾರಣವಾಗಿತ್ತು. ಆ ಬಳಿಕ ತರಕಾರಿಗಳನ್ನು ಕೂಡ ಪ್ಲಾಸ್ಟಿಕ್​ನಿಂದ ತಯಾರಿಸಿ ಮಾರುಕಟ್ಟೆಗೆ ಚೀನಾ ಬಿಡುತ್ತಿದೆ ಎನ್ನುವ ಸುದ್ದಿ ಕೂಡ ಸಸ್ಯಹಾರಿಗಳಿಗೆ ಆತಂಕ ತಂದಿತ್ತು. ಎಲ್ಲಾ ವಿಚಾರದಲ್ಲೂ ರಿವರ್ಸ್ ಎಂಜಿನಿಯರಿಂಗ್ ಮಾಡುವ ಚೀನಾ ಈ ಬಾರಿ ನಕಲಿ ಬೆಳ್ಳುಳ್ಳಿಯನ್ನ ಮಾರುಕಟ್ಟೆಗೆ ಬಿಟ್ಟಿದೆ. ಸದ್ಯ ಈ ಬೆಳ್ಳುಳ್ಳಿ ಉಡುಪಿಯ ಆದಿ ಉಡುಪಿ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ರೆಡಿಯಾಗಿರುವುದನ್ನು ನೋಡಿ ನಗರಸಭಾ ಆಯುಕ್ತರು ದಾಳಿ ಮಾಡಿ ಚೀನಾ ಬೆಳ್ಳುಳ್ಳಿಯನ್ನು ವಶಕ್ಕೆ ಪಡೆದಿದ್ದಾರೆ.

ಕಳೆದ ಕೆಲವು ದಿನಗಳ ಹಿಂದಷ್ಟೇ ಶಿವಮೊಗ್ಗದಲ್ಲೂ ಚೀನಾ ಬೆಳ್ಳುಳ್ಳಿ ಆತಂಕ ಸೃಷ್ಟಿಸಿತ್ತು. ಉಡುಪಿ ಎಪಿಎಂಸಿ ಮಾರುಕಟ್ಟೆಯಲ್ಲಿ ಸುಮಾರು 5 ಕ್ವಿಂಟಲ್ ಚೀನಾ ಬೆಳ್ಳುಳ್ಳಿ ಪತ್ತೆಯಾಗಿದ್ದು ಉಡುಪಿ ನಗರಸಭಾ ಆಯುಕ್ತ ರಾಯಪ್ಪ ಬೆಳ್ಳುಳ್ಳಿಯನ್ನು ವಶಕ್ಕೆ ಪಡೆದಿದ್ದಾರೆ.

ದೇಶಿ ಬೆಳ್ಳುಳ್ಳಿ ದರ ಏರಿಕೆ

ದೇಶಿ ಬೆಳ್ಳುಳ್ಳಿ ಕೆಜಿಗೆ 250 ರೂ.ನಂತೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಆದರೆ ಚೀನಾ ಬೆಳ್ಳುಳ್ಳಿ ವ್ಯಾಪಾರಿಗಳು ಆಕರ್ಷಕವಾಗಿ ಕಾಣುವ ಬೆಳ್ಳುಳ್ಳಿಯನ್ನು ಕೇವಲ 50 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.

ಚೀನಾ ಬೆಳ್ಳುಳ್ಳಿ ಪತ್ತೆ ಮಾಡೋದು ಹೇಗೆ?

ದೇಶಿ ಹಾಗೂ ಚೀನಾ ಬೆಳ್ಳುಳ್ಳಿಯ ವ್ಯತ್ಯಾಸವನ್ನು ಭೌತಿಕ ರಚನೆಯಿಂದ ಸುಲಭವಾಗಿ ಗುರುತಿಸಬಹುದಾಗಿದೆ. ಚೀನಾ ಬೆಳ್ಳುಳ್ಳಿಯ ಗಾತ್ರವು ಚಿಕ್ಕದಾಗಿದೆ. ಆದರೆ ಭಾರತೀಯ ಬೆಳ್ಳುಳ್ಳಿ ಗಾತ್ರದಲ್ಲಿ ದೊಡ್ಡದಾಗಿರುತ್ತದೆ. ಚೀನಾ ಬೆಳ್ಳುಳ್ಳಿಯು ಪ್ರಕಾಶಮಾನವಾದ ಬಿಳಿ ಅಥವಾ ಗುಲಾಬಿ ಬಣ್ಣವನ್ನು ಹೊಂದಿರುತ್ತದೆ. ಆದರೆ ದೇಶಿ ಬೆಳ್ಳುಳ್ಳಿಯ ಪದರವು ಅನೇಕ ಚುಕ್ಕೆಗಳನ್ನು ಹೊಂದಿವೆ. ಅದರ ಸಿಪ್ಪೆಯು ಬಿಳಿಯಿಂದ ಗುಲಾಬಿ ಅಥವಾ ತಿಳಿ ಕಂದು ಬಣ್ಣದ್ದಲ್ಲಿರುತ್ತದೆ. ಇನ್ನು ಚೀನಾದ ಬೆಳ್ಳುಳ್ಳಿಯು ವಾಸನೆಯಲ್ಲಿ ಭಾರತೀಯ ಬೆಳ್ಳುಳ್ಳಿಗಿಂತ ಸ್ವಲ್ಪ ಭಿನ್ನವಾಗಿದೆ. ಚೀನಿ ಬೆಳ್ಳುಳ್ಳಿ ಕಟು ವಾಸನೆ ಇರದೆ ಪರಿಮಳ ಹೊಂದಿರುತ್ತದೆ. ಚೀನಾ ಬೆಳ್ಳುಳ್ಳಿಯ ಸಿಪ್ಪೆಯನ್ನು ಸುಲಭವಾಗಿ ಸುಲಿಯಬಹುದು. ಹೀಗಾಗಿ ಈ ಬೆಳ್ಳುಳ್ಳಿಯು ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತದೆ. ಆದರೆ ಭಾರತೀಯ ಬೆಳ್ಳುಳ್ಳಿಯು ಸಣ್ಣ ಮತ್ತು ಉತ್ತಮವಾದ ಮೊಗ್ಗುಗಳನ್ನು ಹೊಂದಿರುತ್ತದೆ, ಇದರ ಸಿಪ್ಪೆ ಸುಲಿಯಲು ಸ್ವಲ್ಪ ಕಷ್ಟವಾಗಿದೆ. ಸದ್ಯ ಉಡುಪಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ಚೀನಾ ಬೆಳ್ಳುಳ್ಳಿ ವ್ಯಾಪಾರಕ್ಕೆ ಸಿದ್ಧವಾಗಿರುವುದು ಉಡುಪಿಗರ ಆತಂಕಕ್ಕೆ ಕಾರಣವಾಗಿದೆ.

ಒಟ್ಟಾರೆಯಾಗಿ ಜಾಗತಿಕವಾಗಿ ಚೀನಾ ಪ್ರಾರಂಭದಿಂದಲೂ ಹಲವು ವಿಚಾರಗಳ ಮೂಲಕ ಆತಂಕ ಸೃಷ್ಟಿಸುತ್ತಾ ಬಂದಿದೆ. ಈ ಬಾರಿ ನಕಲಿ ಬೆಳ್ಳುಳ್ಳಿ ಮಾರುಕಟ್ಟೆಗೆ ಬಿಡುವ ಮೂಲಕ ಜನರ ಪ್ರಾಣದ ಜೊತೆ ಆಟವಾಡಲು ಹೊರಟಿದೆ ಎಂದರೆ ತಪ್ಪಾಗಲಾರದು.

No Comments

Leave A Comment