ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ಡಿಕೆ ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಯತ್ನಾಳ್
ನವದೆಹಲಿ, ಸೆಪ್ಟೆಂಬರ್ 5: ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ಕೆಲವೇ ದಿನಗಳಲ್ಲಿ ಇದೀಗ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಕೆಯಾಗಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಕಾನೂನು ಹೋರಾಟ ಮುಂದುವರಿಸುವ ಸಂದೇಶ ರವಾನಿಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ಪ್ರಕರಣ ಹಿಂಪಡೆಯುವ ಸರ್ಕಾರದ ನಿರ್ಧಾರ ಪ್ರಶ್ನಿಸಿ ಯತ್ನಾಳ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಆಗಸ್ಟ್ 29ರಂದು ಹೈಕೋರ್ಟ್ ತಿರಸ್ಕರಿಸಿತ್ತು.
ವಿಚಾರಣೆಯ ಬಳಿಕ ಅರ್ಜಿಯನ್ನು ವಜಾ ಮಾಡಿದ್ದ ಹೈಕೋರ್ಟ್, ರಾಜ್ಯ ಸರ್ಕಾರ ಮತ್ತು ಸಿಬಿಐ ನಡುವಿನ ಪ್ರಕರಣವನ್ನು ಸುಪ್ರೀಂ ಕೋರ್ಟ್ ತೀರ್ಮಾನಿಸಲಿ ಎಂದು ಅಭಿಪ್ರಾಯಪಟ್ಟಿತ್ತು. ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದರೆ ಸೂಕ್ತ ಎಂದು ಹೈಕೋರ್ಟ್ ಪೀಠ ಅಭಿಪ್ರಾಯ ವ್ಯಕ್ತಪಡಿಸಿತ್ತು. ಈ ಹಿನ್ನಲೆಯಲ್ಲಿ ಇದೀಗ ಯತ್ನಾಳ್, ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ಈಗಾಗಲೇ ಕೇವಿಯಟ್ ಸಲ್ಲಿಸಿದ್ದಾರೆ.
ಯತ್ನಾಳ್ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಮಾಲಿನ್ಯ ನಿಯಂತ್ರಣ ಮಂಡಳಿ
ಮತ್ತೊಂದೆಡೆ, ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ತೆರೆಯಲು ಹೈಕೋರ್ಟ್ ಅವಕಾಶ ನೀಡಿರುವುದರ ವಿರುದ್ಧ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಪಿಸಿಬಿ) ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಕಾರ್ಖಾನೆ ತೆರೆಯಲು ಅನುಮತಿ ನೀಡದಂತೆ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಕಾರ್ಖಾನೆ ನಿಯಮಗಳ ಉಲ್ಲಂಘಿಸಿದೆ ಎಂದು ಮೇಲ್ಮನವಿ ಅರ್ಜಿಯಲ್ಲಿ ಪಿಸಿಬಿ ಆರೋಪಿಸಿದೆ.
ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನಲ್ಲಿರುವ ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ತೆರೆಯಲು ಹೈಕೋರ್ಟ್ ಅನುಮತಿ ನೀಡಿತ್ತು. ಆದಾಗ್ಯೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಿರಲಿಲ್ಲ. ಇದರ ವಿರುದ್ಧ ಇತ್ತೀಚೆಗಷ್ಟೇ ಯತ್ನಾಳ್ ಪ್ರತಿಭಟನೆಯನ್ನೂ ನಡೆಸಿದ್ದರು. ಪ್ರತಿಪಕ್ಷ ನಾಯಕ ಆರ್ ಅಶೋಕ್ ಸೇರಿದಂತೆ ಬಿಜೆಪಿಯ ಇತರ ನಾಯಕರು ಯತ್ನಾಳ್ ಬೆಂಬಲಕ್ಕೆ ನಿಂತಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಈ ವಿಚಾರವಾಗಿ ಯತ್ನಾಳ್ ಜತೆ ಮಾತುಕತೆ ನಡೆಸಿ, ಪ್ರತಿಭಟನೆ ಕೈಬಿಡಲು ಮನವಿ ಮಾಡಿದ್ದರು.