ಆಂಧ್ರದಲ್ಲಿ ಭಾರೀ ಮಳೆಗೆ 8 ಮಂದಿ ಬಲಿ: ಸಿಎಂ ಚಂದ್ರಬಾಬು ನಾಯ್ಡು ಅವರಿಂದ ಪರಿಸ್ಥಿತಿ ಅವಲೋಕನ
ಹೈದರಾಬಾದ್: ಆಂಧ್ರಪ್ರದೇಶದ ವಿಜಯವಾಡದಲ್ಲಿ ಭಾರೀ ಮಳೆಯ ಪರಿಣಾಮ ಉಂಟಾದ ಭೂಕುಸಿತದಲ್ಲಿಎಂಟು ಮಂದಿ ಸಾವನ್ನಪ್ಪಿದ್ದಾರೆ.
ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಮೃತರ ಕುಟುಂಬ ಸದಸ್ಯರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯಮಂತ್ರಿ ನಾಯ್ಡು ಅವರು ಶನಿವಾರ ಬೆಳಗ್ಗೆಯಿಂದ ರಾಜ್ಯದ ಪರಿಸ್ಥಿತಿ ಮತ್ತು ಮಳೆಯಿಂದ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಕೈಗೊಂಡ ಪರಿಹಾರ ಕ್ರಮಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥರು ಶನಿವಾರ ತಮ್ಮ ಎಲ್ಲಾ ನಿಗದಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ವಿವಿಧ ಸಚಿವರು, ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕ (ಡಿಜಿಪಿ), ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಎಸ್ಪಿಗಳು, ಉಪ ಪೊಲೀಸ್ ವರಿಷ್ಠಾಧಿಕಾರಿಗಳು (ಡಿಎಸ್ಪಿಗಳು) ಪರಿಸ್ಥಿತಿಯ ಬಗ್ಗೆ ಸಂಪೂರ್ಣ ನಿಗಾ ಇಡಲು ಸೂಚಿಸಿದ್ದಾರೆ. ಮಳೆಯ ಆರ್ಭಟಕ್ಕೆ ವಿಶಾಖಪಟ್ಟಣಂನ ಜನ ವಸತಿ ಪ್ರದೇಶ ಸಂಪೂರ್ಣ ಜಲಾವೃತವಾಗಿದೆ. ಎಲ್ಲೆಲ್ಲೂ ಮಳೆ ನೀರು ಆವರಿಸಿದೆ. ನೀರಲ್ಲಿ ಸಿಲುಕಿದ್ದವರ ರಕ್ಷಣೆ ವೇಳೆ ದೊಡ್ಡ ಅನಾಹುತ ತಪ್ಪಿದೆ. ಜನರನ್ನ ಹಗ್ಗ ಕಟ್ಟಿ ಸುರಕ್ಷಿತ ಸ್ಥಳಗಳಿಗೆ ಕರೆತರುವಾಗ ಕೆಲವರು ಕೊಚ್ಚಿ ಹೋಗಿದ್ದಾರೆ. ಈ ಭಯಾನಕ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ. ಇನ್ನು ಕೆಲವರನ್ನು ಸುರಕ್ಷಿವಾಗಿ ರಕ್ಷಿಸಲಾಗಿದೆ.
ಹೈದರಾಬಾದ್ -ವಿಜಯವಾಡ ಹೆದ್ದಾರಿಯ ರಸ್ತೆ ಮೇಲೆ ಸವಾರರ ಹೆಣಗಾಟದ ಪರಿಸ್ಥಿತಿ ಕೇಳುವವರೇ ಇಲ್ಲದಂತಾಗಿತ್ತು. ಇದಷ್ಟೇ ಅಲ್ಲ, ವಿಶಾಖಪಟ್ಟಣಂನ ಕೆಲ ಕಾಲೋನಿಗಳು ಕೆರೆಗಳಂತೆ ಬಾಸವಾಗ್ತಿತ್ತು. ಮೊಗಲ್ರಾಜಪುರಂ ಕಾಲೋನಿಯಲ್ಲಿ ನಿರಂತರ ಮಳೆಗೆ ಭೂಕುಸಿತ ಭಾರೀ ಹಾನಿಯನ್ನುಂಟು ಮಾಡಿದೆ.
ಪ್ರವಾಹದಂತಹ ಪರಿಸ್ಥಿತಿಯಿಂದ ಸಾಕಷ್ಟು ಹಾನಿ ಸಂಭವಿಸಿರುವುದರಿಂದ, ಪರಿಹಾರ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಲು ಮತ್ತು ಹೆಚ್ಚಿನ ಹಾನಿಯಾಗುವ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲು ಪ್ರತಿ ಜಿಲ್ಲೆಗೆ ತಕ್ಷಣವೇ 3 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ನಾಯ್ಡು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಭಾನುವಾರವೂ ರಾಜ್ಯದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯಿದ್ದು, ಎಲ್ಲಾ ರೀತಿಯಲ್ಲಿಯೂ ಸನ್ನದ್ಧರಾಗಿರಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಧಿಕಾರಿಗಳು ನಿಗಾ ವಹಿಸುವಂತೆ ಸೂಚಿಸಿದರು.