ಗಜಪಡೆಗಳು ಮೈಸೂರು ರಾಜಬೀದಿಗೆ ಎಂಟ್ರಿ: ಅಭಿಮನ್ಯು ನೇತೃತ್ವದಲ್ಲಿ ದಸರಾ ತಾಲೀಮು
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಿದ್ದತೆ ಭರ್ಜರಿಯಾಗಿ ನಡೆದಿದೆ. ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ದಸರಾ ಗಜಪಡೆಗೆ ತಯಾರಿ ಜೋರಾಗಿ ನಡೆದಿದೆ. ದಸರಾ ಗಜಪಡೆಗಳು ಮೈಸೂರು ರಾಜಬೀದಿಗೆ ಎಂಟ್ರಿ ಕೊಟ್ಟು ತಾಲೀಮು ಆರಂಭಿಸಿವೆ.
ವಿಶ್ವ ವಿಖ್ಯಾತ ಮೈಸೂರು ದಸರಾ ಹಬ್ಬ ಮನೆ ಬಾಗಿಲಿಗೆ ಬಂದು ನಿಂತಿದೆ. ದಸರಾ ಹಬ್ಬ ಈ ವರ್ಷ ವಿಜೃಂಭಣೆ ಪಡೆದುಕೊಂಡಿದೆ. ನಾಡ ಹಬ್ಬಕ್ಕೆ ಸಕಲ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಇದರ ಭಾಗವಾಗಿ ಕಾಡಿನಿಂದ ನಾಡಿಗೆ ಬಂದಿರುವ ಗಜಪಡೆಗಳು ಅರಮನೆಯಿಂದ ಮೈಸೂರು ರಸ್ತೆಗಳಿಗೆ ಎಂಟ್ರಿ ಕೊಟ್ಟಿವೆ.
ಅಭಿಮನ್ಯು ನೇತೃತ್ವದ ಗಜಪಡೆಗೆ ತಾಲೀಮು ಆರಂಭಿಸಲಾಯ್ತು. ಆನೆಗಳನ್ನು ಮೈಸೂರು ಅರಮನೆಯಿಂದ ಹೊರಗೆ ಕರೆದುಕೊಂಡು ಬರಲಾಯ್ತು. ಬಲರಾಮ ದ್ವಾರದ ಮೂಲಕ ಮೈಸೂರು ರಾಜಬೀದಿಗೆ ಅಭಿಮನ್ಯು ನೇತೃತ್ವದಲ್ಲಿ 8 ಆನೆಗಳು ತಾಲೀಮಿನಲ್ಲಿ ಭಾಗಿಯಾಗಿದ್ದವು.
ಭೀಮ, ಲಕ್ಷ್ಮಿ, ವರಲಕ್ಷ್ಮಿ, ಧನಂಜಯ, ರೋಹಿತ್, ಗೋಪಿ ಹಾಗೂ ಏಕಲವ್ಯ ಆನೆಗಳು ಖುಷಿಯಿಂದ ತಾಲೀಮಿನಲ್ಲಿ ಭಾಗಿಯಾಗಿದ್ದವು. ಕಂಜನ್ ಆನೆ ಅನಾರೋಗ್ಯದ ಹಿನ್ನೆಲೆ ತಾಲೀಮಿನಲ್ಲಿ ಭಾಗಿಯಾಗಿರಲಿಲ್ಲ. ಉಳಿದಂತೆ ಪೊಲೀಸ್ ಬೆಂಗಾವಲಿನಲ್ಲಿ ಗಜಪಡೆಗಳ ಗಜ ಗಾಂಭೀರ್ಯ ನಡಿಗೆ ಎಲ್ಲರ ಗಮನಸೆಳೆಯಿತು.
ಅರಮನೆಯಿಂದ ಹೊರಬಂದ ಆನೆಗಳು ಅರಮನೆ ವೃತ್ತ, ಕೆಆರ್ ವೃತ್ತ, ಸಯ್ಯಾಜಿರಾವ್ ರಸ್ತೆ ಆಯುರ್ವೇದ ಆಸ್ಪತ್ರೆ, ತಿಲಕ್ ನಗರ ಬಂಬೂಬಜಾರ್ ಹೈವೇ ವೃತ್ತದ ಮೂಲಕ ಸಾಗಿ ಬನ್ನಿಮಂಟಪದ ಪಂಜಿನ ಕವಾಯತು ಮೈದಾನ ತಲುಪಿದವು. ಆನೆಗಳ ಆರೋಗ್ಯದ ದೃಷ್ಟಿಯಿಂದ ಈ ತಾಲೀಮು ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಕೇವಲ ದೈಹಿಕ ಕಸರತ್ತು ಮಾತ್ರವಲ್ಲ ಜಂಬೂಸವಾರಿ ವೇಳೆ ಸೇರುವ ಲಕ್ಷಾಂತರ ಜನರು ವಾಹನಗಳನ್ನು ನೋಡಿ ಆನೆಗಳು ವಿಚಲಿತವಾಗಬಾರದು ಎಂಬ ಕಾರಣಕ್ಕೂ ತಾಲೀಮು ಮುಖ್ಯ ಪಾತ್ರ ವಹಿಸುತ್ತದೆ. ಈ ಗಜಪಡೆ ತಾಲೀಮು ದಸರಾ ದಿನದವರೆಗೂ ನಡೆಯಲಿದೆ. ಸ್ವಲ್ಪ ದಿನದ ನಂತರ ಎರಡನೇ ತಂಡದ ಆನೆಗಳು ಕಾಡಿನಿಂದ ನಾಡಿಗೆ ಬರಲಿದ್ದು ಅವು ಸಹಾ ತಾಲೀಮಿನಲ್ಲಿ ಭಾಗವಹಿಸುತ್ತವೆ.
ಮೊದಲ ದಿನವೇ ಸುಮಾರು 5 ಕಿಲೋಮೀಟರ್ ಆನೆಗಳನ್ನು ನಡೆಸಿದ್ದು ಆನೆಗಳಿಗೆ ಕೊಂಚ ಪ್ರಯಾಸ ಅನಿಸಿತು. ಹೀಗಾಗಿ ದಾರಿ ಮಧ್ಯೆ ನಿಂತು ನಿಂತು ಸಾಗಿದವು. ಆನೆಗಳ ಗಜ ಗಾಂಭೀರ್ಯ ನಡಿಗೆಯನ್ನು ಜನರು ಎಂಜಾಯ್ ಮಾಡಿದ್ರು. ಇನ್ನು ಎಲ್ಲಾ ಆನೆಗಳು ಶಿಸ್ತು ಬದ್ದವಾಗಿ ವಾಕಿಂಗ್ ನಡೆಸಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಯ ಖುಷಿಗೆ ಕಾರಣವಾಗಿದೆ. ಒಟ್ಟಾರೆ ನಾಡಹಬ್ಬದ ಕಲರವ ದಿನೇ ದಿನೇ ಕಳೆಗಟ್ಟುತ್ತಿದ್ದು ಈ ಬಾರಿ ಅದ್ದೂರಿ ದಸರಾ ಮಹೋತ್ಸವ ಜರುಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ.