ಪುತ್ತೂರು: ಪ್ರೀತಿ ನಿರಾಕರಿಸಿದ್ದಕ್ಕೆ ಮುಸ್ಲಿಂ ವಿದ್ಯಾರ್ಥಿನಿಗೆ ಚೂರಿ ಇರಿದ ಅಪ್ರಾಪ್ತ ಹಿಂದೂ ಬಾಲಕ, ಪರಿಸ್ಥಿತಿ ಉದ್ವಿಗ್ನ
ಪುತ್ತೂರು: ಪ್ರೀತಿ ನಿರಾಕರಿಸಿದ ಮುಸ್ಲಿಂ ವಿದ್ಯಾರ್ಥಿನಿಗೆ ಸಹಪಾಠಿ ಹಿಂದೂ ವಿದ್ಯಾರ್ಥಿ ಚಾಕುವಿನಿಂದ ಇರಿದಿರುವ ಘಟನೆ ಮಂಗಳೂರಿನ ಪುತ್ತೂರಿನಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೊಂಬೆಟ್ಟು ಸರ್ಕಾರಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು ಹಿಂದೂ ವಿದ್ಯಾರ್ಥಿಯೋರ್ವ ಮುಸ್ಲಿಂ ವಿದ್ಯಾರ್ಥಿನಿಯ ಕೈಗೆ ಚಾಕುವಿನಿಂದ ಇರಿದಿದ್ದಾನೆ. ವಿದ್ಯಾರ್ಥಿನಿಯ ಕೈಗೆ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇನ್ನು ಚಾಕುವಿನಿಂದ ಇರಿದಿದ್ದ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು ಇಬ್ಬರು ಅನ್ಯಕೋಮಿನ ವಿದ್ಯಾರ್ಥಿಗಳು ಆಗಿರುವುದರಿಂದ ಚೂರಿ ಇರಿದ ವಿದ್ಯಾರ್ಥಿಯ ಹೆಸರು ಬದಲಿಸಿ ಹೇಳುವಂತೆ ಶಿಕ್ಷಕಿ ಒತ್ತಡ ಹೇರಿದ್ದಾರೆ ಎಂದು ಅಪ್ರಾಪ್ತ ಬಾಲಕಿ ಆರೋಪ ಮಾಡಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಬಾಲಕಿಯ ಪೋಷಕರು, ಸ್ಥಳೀಯರು ಆಸ್ಪತ್ರೆ ಮುಂದೆ ಜಮಾಯಿಸಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಪುತ್ತೂರು ಟೌನ್ ಠಾಣೆ ಪೊಲೀಸರು ಆಸ್ಪತ್ರೆಗೆ ಆಗಮಿಸಿ ಬಾಲಕಿಯ ಹೇಳಿಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಆಸ್ಪತ್ರೆ ಮುಂದೆ ಜಮಾಯಿಸಿದ್ದ ಜನರ ಮನವೊಲಿಸಿ ಹೊರಗೆ ಕಳುಹಿಸಿದ್ದಾರೆ. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ.