ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...

ಎಸ್​ಐಟಿ ಚಾರ್ಜ್​ಶೀಟ್​​ನಲ್ಲಿ ಕಾಣೆಯಾದ ಮಾಜಿ ಸಚಿವ ನಾಗೇಂದ್ರಗೆ ಸಿಬಿಐ ಉರುಳು

ಬೆಂಗಳೂರು, ಆಗಸ್ಟ್ 7: ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ತನಿಖೆ ವಿಚಾರವಾಗಿ ಯೂನಿಯನ್ ಬ್ಯಾಂಕ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದೆ. ಹಗರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕು ಎಂದು ಬ್ಯಾಂಕ್ ರಿಟ್ ಅರ್ಜಿ ಸಲ್ಲಿಸಿದೆ. ಯೂನಿಯನ್ ಬ್ಯಾಂಕ್ ಪರ ಅಟಾರ್ನಿ ಜನರಲ್ ವೆಂಕಟರಮಣಿ ವಾದ ಮಂಡಿಸಿದ್ದು, ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿದರು.

ಯೂನಿಯನ್ ಬ್ಯಾಂಕ್ ವಾದವೇನು?

50 ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತದ ಹಗರಣವಿದ್ದರೆ ಸಿಬಿಐ ತನಿಖೆ ನಡೆಸಬೇಕು. ಸಿಬಿಐಗೆ ಮಾತ್ರ ಬ್ಯಾಂಕ್ ಕೇಸ್​ಗಳ ತನಿಖೆ ಅಧಿಕಾರವಿದೆ. ಬ್ಯಾಂಕ್ ಅಧಿಕಾರಿಗಳಲ್ಲದೆ ಇತರರನ್ನೂ ಸಿಬಿಐ ತನಿಖೆಗೆ ಒಳಪಡಿಸಬಹುದು. ಆದರೆ, ಸಿಬಿಐ ಅಧಿಕಾರವ್ಯಾಪ್ತಿಯಲ್ಲಿ ಎಸ್ಐಟಿ ತನಿಖೆ ನಡೆಸುವಂತಿಲ್ಲ ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪರ ಅಟಾರ್ನಿ ಜನರಲ್ ವಾದ ಮಂಡಿಸಿದರು.

ಸರ್ಕಾರದ ವಾದವೇನು?

ಪೊಲೀಸ್ ತನಿಖೆ ನಡೆಸುವುದು ರಾಜ್ಯಗಳ‌ ಅಧಿಕಾರ ವ್ಯಾಪ್ತಿಯಲ್ಲಿದೆ. ಬ್ಯಾಂಕ್ ಅರ್ಜಿಗೆ ಒಂದು ವಾರದಲ್ಲಿ ಆಕ್ಷೇಪಣೆ ಸಲ್ಲಿಸುತ್ತೇವೆ. ಎಸ್ಐಟಿಯ ಆರೋಪಪಟ್ಟಿಯಲ್ಲಿ ಬ್ಯಾಂಕ್ ಅಧಿಕಾರಿಗಳನ್ನು ಸೇರಿಸಿಲ್ಲ. ಪ್ರಕರಣ ರದ್ದು ಕೋರಿದ ಬ್ಯಾಂಕ್ ಅಧಿಕಾರಿಗಳ ಅರ್ಜಿ ಮುಕ್ತಾಯಗೊಳಿಸಬೇಕು ಎಂದು ಸರ್ಕಾರದ ಪರ ವಕೀಲರು ಹೈಕೋರ್ಟ್​ಗೆ ಮನವಿ ಮಾಡಿದರು.

ಸದ್ಯ ಅರ್ಜಿಯನ್ನು ಮುಕ್ತಾಯಗೊಳಿಸಿರುವ ಹೈಕೋರ್ಟ್​ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 4ಕ್ಕೆ ಮುಂದೂಡಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ಎರಡು ದಿನ ಹಿಂದಷ್ಟೇ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದೆ. ಒಟ್ಟು 12 ಆರೋಪಿಗಳ ವಿರುದ್ಧ ಸುಮಾರು 3 ಸಾವಿರ ಪುಟಗಳ ಚಾರ್ಜ್ ಶೀಟ್ ಅನ್ನು ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದೆ. ಆದರೆ, ಇದರಲ್ಲಿ ಈಗಾಗಲೇ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಕಾಂಗ್ರೆಸ್​ ಶಾಸಕ ನಾಗೇಂದ್ರ ಹೆಸರಿಲ್ಲ. ಮತ್ತೋರ್ವ ಶಾಸಕ ಬಸನಗೌಡ ದದ್ದಲ್​ ಅವರ ಹೆಸರು ಸಹ ಉಲ್ಲೇಖವಾಗಿಲ್ಲ. ಇದರ ಬೆನ್ನಲ್ಲೇ ಯೂನಿಯನ್ ಬ್ಯಾಂಕ್ ಹೈಕೋರ್ಟ್ ಮೆಟ್ಟಿಲೇರಿದೆ.

No Comments

Leave A Comment