LK Advani :ಬಿಜೆಪಿಯ ಹಿರಿಯ ನಾಯಕ ಎಲ್ಕೆ ಅಡ್ವಾಣಿ ಮತ್ತೆ ಆಸ್ಪತ್ರೆಗೆ ದಾಖಲು
ಬಿಜೆಪಿಯ ಹಿರಿಯ ನಾಯಕ ಎಲ್ಕೆ ಅಡ್ವಾಣಿ(LK Advani) ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಕೇವಲ ಒಂದು ತಿಂಗಳಾಗಿತ್ತಷ್ಟೇ ಇಂದು ಅನಾರೋಗ್ಯದ ಕಾರಣ ಮತ್ತೆ ದೆಹಲಿಯ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ. 96 ವರ್ಷದ ಅಡ್ವಾಣಿಯವರ ಆರೋಗ್ಯ ಸ್ಥಿರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಅವರನ್ನು ನರರೋಗ ತಜ್ಞ ಡಾ., ವಿನಿತ್ ಅವರು ನೋಡಿಕೊಳ್ಳುತ್ತಿದ್ದಾರೆ.
ಜುಲೈನಲ್ಲಿ ಅಪೋಲೊ ಆಸ್ಪತ್ರೆಗೆ ದಾಖಲಾಗುವ ಮೊದಲು ಅಡ್ವಾಣಿ ಅವರು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಕೂಡ ದಾಖಲಾಗಿದ್ದರು. ಸುಮಾರು ಮೂರು ದಶಕಗಳ ಸಂಸದೀಯ ವೃತ್ತಿಜೀವನವನ್ನು ಪೂರ್ಣಗೊಳಿಸಿದ ಅಡ್ವಾಣಿ 1999 ರಿಂದ 2004ರವರೆಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಮೊದಲು ಗೃಹ ಸಚಿವರಾಗಿದ್ದರು ನಂತರ ಉಪ ಪ್ರಧಾನಿಯಾಗಿದ್ದರು.
ಮಾರ್ಚ್‌ನಲ್ಲಿ ಭಾರತ ರತ್ನ ನೀಡಿ ಗೌರವಿಸಲಾಯಿತು. ಅವರ ನಿವಾಸದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತು ಅಡ್ವಾಣಿ ಅವರ ಕುಟುಂಬ ಉಪಸ್ಥಿತರಿದ್ದರು.