ವಯನಾಡು: ಭಾರಿ ಮಳೆ ಮತ್ತು ಭೀಕರ ಭೂಕುಸಿತದಿಂದಾಗಿ ನಲುಗಿ ಹೋಗಿರುವ ಕೇರಳದ ವಯನಾಡಿನಲ್ಲಿ ಇದೀಗ ಕಳ್ಳರ ಹಾವಳಿ ಆರಂಭವಾಗಿದ್ದು, ಭೂಕುಸಿತದಲ್ಲಿ ನಿರಾಶ್ರಿತವಾಗಿರುವ ಮನೆಗಳಿಗೆ ನುಗ್ಗಿ ಕಳ್ಳತನ ಮಾಡಲಾಗುತ್ತಿದೆ ಎಂದು ಸಂತ್ರಸ್ಥರು ಅಳಲು ತೋಡಿಕೊಂಡಿದ್ದಾರೆ.
ಹೌದು.. ಭೂಕುಸಿತದ ಬಳಿಕ ಸಂತ್ರಸ್ಥರನ್ನು ವಯನಾಡಿನ ಪುನರ್ವಸತಿ ಕೇಂದ್ರಗಳಿಗೆ ರವಾನೆ ಮಾಡಲಾಗುತ್ತಿದ್ದು, ಇಂತಹ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳರು ಮನೆಗಳ್ಳತನ ಮಾಡುತ್ತಿದ್ದಾರೆ. ಮನೆಗಳಲ್ಲಿಸಿಕ್ಕ ಸಿಕ್ಕ ವಸ್ತುಗಳನ್ನು ಕದ್ದು ಹೊತ್ತೊಯ್ಯುತ್ತಿದ್ದಾರೆ. ಹಾನಿಗೊಳಗಾದ ಮನೆಗಳಿಗೆ ಕಳ್ಳರು ನುಗ್ಗಿ ಅಳಿದುಳಿದ ವಸ್ತುಗಳನ್ನು ಕದ್ದೊಯ್ಯುತ್ತಿದ್ದಾರೆ ಎಂದು ಜನರು ದೂರಿದ್ದಾರೆ.
ದುರಂತ ನಡೆದ ಸ್ಥಳದಲ್ಲಿ ಜನವಸತಿ ಇರದ ಕಾರಣ ಕಳ್ಳರು ಅದರ ಲಾಭ ಪಡೆದುಕೊಳ್ಳುತ್ತಿದ್ದು, ಮನೆಯಲ್ಲಿನ ಮೌಲ್ಯಯುತ ವಸ್ತುಗಳು ಕಳ್ಳತನವಾಗುತ್ತಿವೆ. ಹೀಗಾಗಿ ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ. ಈ ಹಿನ್ನೆಲೆ ಘಟನೆ ನಡೆದ ಸ್ಥಳಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.
ಭೂಕುಸಿತದ ಸಂದರ್ಭದಲ್ಲಿ ಪ್ರಾಣ ರಕ್ಷಣೆಗಾಗಿ ಮನೆಗಳನ್ನು ತೊರೆದು ರೆಸಾರ್ಟ್‌ನಲ್ಲಿ ತಂಗಿದ್ದೇವೆ. ಆದರೆ ಪರಿಸ್ಥಿತಿ ಅವಲೋಕನಕ್ಕಾಗಿ ಮನೆಯ ಬಳಿ ತೆರಳಿದ್ದಾಗ ಬಾಗಿಲುಗಳು ಮುರಿದುಕೊಂಡಿತ್ತು, ಬಟ್ಟೆಗಳು ಹಾಗೂ ಕೆಲವು ವಸ್ತುಗಳು ನಾಪತ್ತೆಯಾಗಿವೆ’ ಎಂದು ಸಂತ್ರಸ್ತರೊಬ್ಬರು ಹೇಳಿದ್ದಾರೆ.
ರಾತ್ರಿ ವೇಳೆ ಕಳ್ಳತನ ಮಾಡುವ ಉದ್ದೇಶದಿಂದ ಈ ಪ್ರದೇಶಕ್ಕೆ ನುಗ್ಗುವವರನ್ನು ಗುರುತಿಸಿ ಶಿಕ್ಷಿಸಬೇಕು ಎಂದು ಕೆಲ ಸಂತ್ರಸ್ತರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ದುರಂತದಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಈಗ ಮನೆಗಳಲ್ಲಿ ಅಳಿದುಳಿದ ವಸ್ತುಗಳೂ ಕೂಡ ಕಳ್ಳರ ಪಾಲಾಗುತ್ತಿವೆ. ನಾವು ತಂಗಿರುವ ರೆಸಾರ್ಟ್‌ನಲ್ಲಿರುವ ಅವರ ಕೊಠಡಿಯನ್ನು ಕೂಡ ಕಳ್ಳರು ಗುರಿಯಾಗಿಸಿಕೊಂಡು ಅವರ ಬಟ್ಟೆಗಳನ್ನು ಕದ್ದೊಯ್ದಿದ್ದಾರೆ ಎಂದು ದೂರಿದ್ದಾರೆ.
ಚೂರಲ್‌ಮಲ, ಮುಂಡಕ್ಕೈ ಗ್ರಾಮಗಳಲ್ಲಿ ಅವಶೇಷಗಳಡಿ ಸಿಲುಕಿರುವ ಮೃತದೇಹಗಳ ಪತ್ತೆ ಕಾರ್ಯ ಮುಂದುವರಿದಿದ್ದು, ರಾತ್ರಿ ಹೊತ್ತು ಪೊಲೀಸರ ಅನುಮತಿಯಿಲ್ಲದೆ ಗ್ರಾಮಕ್ಕೆ ಯಾರಿಗೂ ಪ್ರವೇಶವಿಲ್ಲ. ಹೀಗಿದ್ದೂ ಕಳ್ಳತನ ಪ್ರಕರಣಗಳ ಬಗ್ಗೆ ದೂರು ಬಂದ ಹಿನ್ನೆಲೆ ರಾತ್ರಿ ವೇಳೆ ಗಸ್ತಿಗೆ ಆದೇಶಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.