ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ವಯನಾಡಿನಲ್ಲಿ ಕಾಂಗ್ರೆಸ್ ನಿಂದ 100ಕ್ಕೂ ಹೆಚ್ಚು ಮನೆಗಳ ನಿರ್ಮಾಣ: ರಾಹುಲ್ ಗಾಂಧಿ
ವಯನಾಡು: ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿರುವ ಭೂ ಕುಸಿತ, ಇಲ್ಲಿಯವರೆಗೂ ರಾಜ್ಯ ನೋಡಿರದ ಒಂದು ಭೀಕರ ದುರಂತವಾಗಿದ್ದು, ಇದನ್ನು ವಿಭಿನ್ನವಾಗಿ ಪರಿಗಣಿಸಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಇತರ ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ಜಿಲ್ಲಾಡಳಿತ ಮತ್ತು ಪಂಚಾಯತ್‌ನ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಈ ವಿಷಯವನ್ನು ಕೇಂದ್ರ ಸರ್ಕಾರ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಪ್ರಸ್ತಾಪಿಸಲಿದ್ದೇನೆ. ಇದು ವಿಭಿನ್ನ ಹಂತದ ದುರಂತವಾಗಿದ್ದು, ವಿಭಿನ್ನವಾಗಿ ಪರಿಗಣಿಸಬೇಕು ಎಂದರು.
ಇದೇ ವೇಳೆ ವಯನಾಡಿನಲ್ಲಿ ಕಾಂಗ್ರೆಸ್ ನಿಂದ 100ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗುವುದು ಎಂದು ಅವರು ಭರವಸೆ ನೀಡಿದರು. ಸಭೆಯಲ್ಲಿ ವಿನಾಶಕಾರಿ ಭೂ ಕುಸಿತದಿಂದ ಮೃತಪಟ್ಟವರ ಸಂಖ್ಯೆ, ನಾಶವಾದ ಮನೆಗಳು ಮತ್ತು ನಾಪತ್ತೆಯಾದವರನ್ನು ಹುಡುಕಲು ಮತ್ತು ರಕ್ಷಿಸಲು ಅನುಸರಿಸುತ್ತಿರುವ ಕಾರ್ಯತಂತ್ರಗಳ ಬಗ್ಗೆ ಅಧಿಕಾರಿಗಳು ರಾಹುಲ್ ಗಾಂಧಿಗೆ ವಿವರಿಸಿದರು.
ನಿನ್ನೆ ವಯನಾಡಿಗೆ ಆಗಮಿಸಿದ ರಾಹುಲ್ ಗಾಂಧಿ, ಭೂಕುಸಿತದಿಂದ ಉಂಟಾದ ವಿನಾಶದ ಪ್ರಮಾಣವನ್ನು ನೋಡಿ “ರಾಷ್ಟ್ರೀಯ ವಿಪತ್ತು” ಎಂದು ಕರೆದರು. ಅಲ್ಲದೇ, ಇದನ್ನು ಎದುರಿಸಲು ತುರ್ತು ಸಮಗ್ರ ಕ್ರಿಯಾ ಯೋಜನೆಗೆ ಒತ್ತಾಯಿಸಿದರು.