ರಾಮನಗರ: ದಲಿತ ಯುವಕನ ಕೈ ಕತ್ತರಿಸಿದ್ದ ಇಬ್ಬರು ರೌಡಿಶೀಟರ್‌ಗಳ ಬಂಧನ
ರಾಮನಗರ: ದಲಿತ ಯುವಕನ ಮೇಲೆ ಹಲ್ಲೆ ನಡೆಸಿ ಕೈ ಕತ್ತರಿಸಿದ ಆರೋಪದ ಮೇಲೆ ಕನಕಪುರದಲ್ಲಿ ಭಾನುವಾರ ಇಬ್ಬರು ರೌಡಿಶೀಟರ್‌ಗಳ ಕಾಲುಗಳಿಗೆ ಪೊಲೀಸರು ಗುಂಡು ಹಾರಿಸುವ ಮೂಲಕ ಅವರನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಹರ್ಷ ಅಲಿಯಾಸ್ ಕೈಮಾ ಮತ್ತು ಕರುಣೇಶ್ ಅಲಿಯಾಸ್ ಕಣ್ಣ ಎಂದು ಗುರುತಿಸಲಾಗಿದೆ. ಇಬ್ಬರು ರೌಡಿಶೀಟರ್‌ಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಜುಲೈ 21 ರಂದು ಮಳಗಾಲು ಗ್ರಾಮದ ದಲಿತ ಯುವಕ ಅನೀಶ್‌ಕುಮಾರ್ ಕುಟುಂಬದ ಮೇಲೆ ದಾಳಿ ನಡೆಸಿದ ಒಕ್ಕಲಿಗ ಸಮುದಾಯದ ಏಳು ಮಂದಿ ಶಸ್ತ್ರಧಾರಿಗಳ ತಂಡ ಆತನ ಎಡಗೈ ಕತ್ತರಿಸಿ ಪರಾರಿಯಾಗಿತ್ತು.
ದಲಿತ ಪರ ಸಂಘಟನೆಗಳು ಈ ಕೃತ್ಯವನ್ನು ಖಂಡಿಸಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಸಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಅನೀಶ್ ಕುಮಾರ್ ತನ್ನ ಚಿಕ್ಕಪ್ಪನೊಂದಿಗೆ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಗುಂಪು ದಾಳಿ ಮಾಡಿತ್ತು. ಸ್ನೇಹಿತರ ಜೊತೆ ರಸ್ತೆಯಲ್ಲಿ ನಿಂತು ಹರಟೆ ಹೊಡೆಯುತ್ತಿದ್ದ ಆರೋಪಿಯೊಬ್ಬ ಅನೀಶ್ ಜಾತಿ ಕೇಳಿದ್ದು ವಾಗ್ವಾದಕ್ಕೆ ಕಾರಣವಾಗಿತ್ತು. ನಂತರ ಸಂತ್ರಸ್ತ ತನ್ನ ಚಿಕ್ಕಪ್ಪನೊಂದಿಗೆ ಅಲ್ಲಿಂದ ತೆರಳಿದ್ದ, ಇದಾದ ಕೆಲ ಹೊತ್ತಿನ ಬಳಿ ಆರೋಪಿಗಳು ಅನೀಶ್‌ನ ಮನೆಗೆ ನುಗ್ಗಿ ಜಾತಿ ನಿಂದನೆ ಮಾಡಿ ಕುಟುಂಬಸ್ಥರನ್ನು ನಿಂದಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅನೀಶ್ ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಅವರ ಕುಟುಂಬ ಸದಸ್ಯರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಏಳು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಇತರರು ತಲೆಮರೆಸಿಕೊಂಡಿದ್ದಾರೆ.