ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಗೌರಿಕುಂಡ್ ಬಳಿ ಭೂಕುಸಿತ; ಕೇದಾರನಾಥಕ್ಕೆ ಹೋಗುತ್ತಿದ್ದ ಮೂವರು ಯಾತ್ರಿಕರ ಸಾವು; ಎಂಟು ಮಂದಿಗೆ ಗಾಯ
ನವದೆಹಲಿ, ಜುಲೈ 21: ಉತ್ತರಾಖಂಡ್ ರಾಜ್ಯದಲ್ಲಿರುವ ಕೇದಾರನಾಥ ಮಂದಿರಕ್ಕೆ ಹೋಗುವ ದಾರಿಯಲ್ಲಿ ಭೂಕುಸಿತ ಸಂಭವಿಸಿ ಮೂವರು ಯಾತ್ರಿಕರು ಸಾವನ್ನಪ್ಪಿದ ಘಟನೆ ನಡೆದಿದೆ.
ಭಾನುವಾರ ಬೆಳಗ್ಗೆ ಸಂಭವಿಸಿದ ಈ ದುರಂತದಲ್ಲಿ ಎಂಟಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗೌರಿಕುಂಡ್ನಿಂದ ಕೇದಾರನಾಥಕ್ಕೆ ಕಾಲುದಾರಿಯಲ್ಲಿ ಯಾತ್ರಿಕರು ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಚೀರ್ಬಾಸ ಎಂಬ ಪ್ರದೇಶದಲ್ಲಿ ಭೂಕುಸಿತ ಘಟಿಸಿರುವುದು ವರದಿಯಾಗಿದೆ. ಈ ದುರ್ಘಟನೆಯಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದುರಂತ ಸಂಭವಿಸಿದ ಕೆಲವೇ ಹೊತ್ತಿನಲ್ಲಿ ರಕ್ಷಣಾ ತಂಡ ಧಾವಿಸಿ ಹೋಗಿದ್ದು, ಕೆಲವರನ್ನು ರಕ್ಷಿಸಲು ಯಶಸ್ವಿಯಾಗಿದೆ. ಎಂಟು ಮಂದಿಗೆ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾವನ್ನಪ್ಪಿದ ಮೂವರನ್ನು ಗುರುತಿಸಲಾಗಿದೆ. ಇವರಲ್ಲಿ ಇಬ್ಬರು ಮಹಾರಾಷ್ಟ್ರದವರಾದರೆ, ಒಬ್ಬರು ಸ್ಥಳೀಯರೆನ್ನಲಾಗಿದೆ. ಮಹಾರಾಷ್ಟ್ರದ ನಾಗಪುರದ ಅರುಣ್ ಪರಟೆ (31 ವರ್ಷ) ಮತ್ತು ಜಲ್ನಾ ಜಿಲ್ಲೆಯ ಸುನೀಲ್ ಮಹಾದೇವ್ ಕಾಳೆ (24 ವರ್ಷ) ಹಾಗು ಉತ್ತರಾಖಂಡ್ನ ತಿಲ್ವಾರದ ಅನುರಾಗ್ ಬಿಷ್ತ್ ಅವರು ಮೃತ ವ್ಯಕ್ತಿಗಳಾಗಿದ್ದಾರೆ.
ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.
‘ಕೇದಾರನಾಥ ಯಾತ್ರೆಯ ಹಾದಿಯಲ್ಲಿ ಗುಡ್ಡದ ಮೇಲಿನಿಂದ ಕಲ್ಲು, ಮಣ್ಣು ಕುಸಿತು ಬಿದ್ದು, ಕೆಲ ಯಾತ್ರಿಕರಿಗೆ ಗಾಯವಾಗಿರುವ ಸುದ್ದಿ ಬಂದಿರುವುದು ವಿಷಾದನೀಯ. ಮೃತರ ಕುಟುಂಬಗಳಿಗೆ ಈ ನೋವು ಸಹಿಸಿಕೊಳ್ಳಲು ಆ ದೇವರು ಶಕ್ತಿ ಕೊಡಲಿ,’ ಎಂದು ಮುಖ್ಯಮಂತ್ರಿಗಳು ಎಕ್ಸ್ ಪೋಸ್ಟ್ ಹಾಕಿದ್ದಾರೆ.
ಅಮರನಾಥ ಯಾತ್ರೆಗೆ ಜಮ್ಮು ಬಿಟ್ಟ ಹೊಸ ತಂಡ
ಭಾನುವಾರ ಬೆಳಗ್ಗೆ ಮೂರು ಸಾವಿರಕ್ಕೂ ಹೆಚ್ಚು ಯಾತ್ರಿಕರು ಜಮ್ಮುವಿನಿಂದ ಅಮರನಾಥಕ್ಕೆ ಹೊರಟಿದ್ದಾರೆ. ಅನಂತನಾಗ್ ಜಿಲ್ಲೆಯ ಪಹಲ್ಗಮ್ ಬಳಿಯ ಹಿಮಾಲಯದ 12,756 ಅಡಿ ಎತ್ತರದಲ್ಲಿ ಗುಹೆಯೊಂದರಲ್ಲಿ ಅಮರನಾಥ ಮಂದಿರ ಇದೆ. ಪ್ರತೀ ವರ್ಷ ಲಕ್ಷಾಂತರ ಜನರು ದುರ್ಗಮ ವಾತಾವರಣದಲ್ಲಿ ಪಾದಯಾತ್ರೆ ಮೂಲಕ ಅಮರನಾಥಕ್ಕೆ ಹೋಗುತ್ತಾರೆ. ಈ ವರ್ಷ ಹೆಚ್ಚೂಕಡಿಮೆ ನಾಲ್ಕು ಲಕ್ಷ ಜನರು ಈ ಮಂದಿರಕ್ಕೆ ಹೋಗಿ ಶಿವಲಿಂಗ ದರ್ಶನ ಮಾಡಿ ಬಂದಿದ್ದಾರೆ.