``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

ಮನೆ ಊಟ, ಹಾಸಿಗೆ, ಪುಸ್ತಕ ಪಡೆಯಲು ಅನುಮತಿ ಕೊಡಿ: ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ ನಟ ದರ್ಶನ್

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್‌ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಮನೆಯಿಂದ ಊಟ, ಹಾಸಿಗೆ, ಪುಸ್ತಕಗಳನ್ನು ಪಡೆಯಲು ಅನುಮತಿ ಕೋರಿ ಹೈಕೋರ್ಟ್‌ ಗೆ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.

ನಟ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ತಮಗೆ ಊಟ, ಹಾಸಿಗೆ ಮತ್ತು ಪುಸ್ತಕಗಳನ್ನು ಮನೆಯಿಂದ ಪಡೆಯಲು ಅನುಮತಿ ಕೋರಿ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್‌ ಗೆ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.

ಜೈಲಿನಲ್ಲಿ ನೀಡುತ್ತಿರುವ ಊಟ ಜೀರ್ಣವಾಗುತ್ತಿಲ್ಲ. ಇದರಿಂದ ಅತಿಸಾರ – ಭೇದಿ ಆಗುತ್ತಿದೆ. ಜೈಲಿನ ಆಹಾರ ಒಗ್ಗದೇ ಫುಡ್ ಪಾಯಿಸನಿಂಗ್ ಆಗುತ್ತಿದೆ. ಹೀಗೆಂದು ಜೈಲಿನ ವೈದ್ಯರೇ ಮಾಹಿತಿ ನೀಡಿದ್ದಾರೆ ಎಂದು ಅರ್ಜಿಯಲ್ಲಿ ದರ್ಶನ್ ಪರ ವಕೀಲರು ಉಲ್ಲೇಖಿಸಿದ್ದಾರೆ.

ಅತಿಸಾರ, ಭೇದಿಯಿಂದಾಗಿ ದರ್ಶನ್ ದೇಹದ ತೂಕ ತುಂಬಾ ಕಡಿಮೆಯಾಗಿದೆ. ಹಲವು ಕೆಜಿಗಳಷ್ಟು ತೂಕವನ್ನು ದರ್ಶನ್ ಕಳೆದುಕೊಂಡಿದ್ದಾರೆ. ಮನೆ ಊಟಕ್ಕೆ ಅನುಮತಿ ನೀಡುವಂತೆ ಮಾಡಿದ್ದ ಕೋರಿಕೆಯನ್ನು ಮನ್ನಿಸಿಲ್ಲ, ಕೋರ್ಟ್ ಆದೇಶವಿಲ್ಲವೆಂದು ಜೈಲು ಅಧಿಕಾರಿಗಳು ಅನುಮತಿ ನೀಡಿಲ್ಲ. ಜೈಲು ಅಧಿಕಾರಿಗಳ ನಿರಾಕರಣೆ ಕಾನೂನುಬಾಹಿರ ಮತ್ತು ಅಮಾನವೀಯವಾಗಿದೆ.

ಇದೇ ರೀತಿ ಮುಂದುವರಿದರೆ ದರ್ಶನ್ ಆರೋಗ್ಯಕ್ಕೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಮನೆ ಊಟಕ್ಕೆ ಅನುಮತಿ ನೀಡಿದರೆ ಯಾರಿಗೂ ತೊಂದರೆಯಾಗುವುದಿಲ್ಲ. ಇದರಿಂದ ಸರಕಾರದ ಬೊಕ್ಕಸಕ್ಕೂ ಹೊರೆ ಕಡಿಮೆಯಾಗುತ್ತದೆ. ಹೀಗಾಗಿ ಕುಟುಂಬದವರಿಂದ ಮನೆ ಊಟ ಪಡೆಯಲು ಅನುಮತಿ ನೀಡಬೇಕು ಎಂದು ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌, ಪವಿತ್ರಾಗೌಡ ಸೇರಿದಂತೆ 17 ಮಂದಿ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

No Comments

Leave A Comment