ದೇಶ ಲೋಕಸಭೆ ಚುನಾವಣೆ ಫಲಿತಾಂಶ ನಮ್ಮ ಸರ್ಕಾರದ ನೀತಿಗಳಿಗೆ ಸಿಕ್ಕಿದ ಜನರ ಅನುಮೋದನೆಯಾಗಿದೆ: ಪ್ರಧಾನಿ ಮೋದಿ
ನವದೆಹಲಿ: 2024 ರ ಲೋಕಸಭಾ ಚುನಾವಣೆಯ ನಂತರ ಸಂಸತ್ತಿನಲ್ಲಿ ಮೊದಲ ಅಧಿವೇಶನ ಆರಂಭಕ್ಕೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ಆವರಣದಲ್ಲಿ ಮಾಧ್ಯಮವನ್ನುದ್ದೇಶಿಸಿ ಸಾಂಪ್ರದಾಯಿಕ ಭಾಷಣದಲ್ಲಿ 50 ವರ್ಷಗಳ ಹಿಂದೆ ದೇಶದಲ್ಲಿ ಹೇರಲಾದ ತುರ್ತು ಪರಿಸ್ಥಿತಿಯ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್ ನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.
ಮೊದಲಿಗೆ, ತಮ್ಮ ನೇತೃತ್ವದ ಸರ್ಕಾರಕ್ಕೆ ಮೂರನೇ ಅವಧಿಗೆ ಎನ್‌ಡಿಎಗೆ ಜನಾದೇಶ ನೀಡಿದ್ದಕ್ಕಾಗಿ ಪ್ರಧಾನಿ ಮೋದಿ ದೇಶವಾಸಿಗಳಿಗೆ ಧನ್ಯವಾದ ಹೇಳಿದರು.
ನಮ್ಮ ದೇಶದ ನಾಗರಿಕರು ಸತತ ಮೂರನೇ ಬಾರಿಗೆ ಎನ್ ಡಿಎ ಸರ್ಕಾರವನ್ನು ನಂಬಿದ್ದಾರೆ, ಇದರರ್ಥ ಅವರು ಸರ್ಕಾರದ ನೀತಿಗಳು ಮತ್ತು ಉದ್ದೇಶಗಳಿಗೆ ಅನುಮೋದನೆಯ ಮುದ್ರೆಯನ್ನು ಒತ್ತಿದ್ದಾರೆ. ನಿಮ್ಮ ಬೆಂಬಲ ಮತ್ತು ವಿಶ್ವಾಸಕ್ಕಾಗಿ ನಾನು ಪ್ರತಿಯೊಬ್ಬರಿಗೂ ಕೃತಜ್ಞನಾಗಿದ್ದೇನೆ ಎಂದರು.
ಸಂಸತ್ತಿನಲ್ಲಿ ದೇಶದ ಮೇಲಿನ ಚರ್ಚೆಗಳಿಗೆ ಒಮ್ಮತಕ್ಕೆ ಆಗ್ರಹಿಸಿದ ಅವರು, ಸರ್ಕಾರವನ್ನು ನಡೆಸಲು ಬಹುಮತ ಬೇಕಾಗುತ್ತದೆ ಆದರೆ ದೇಶವನ್ನು ನಡೆಸಲು ಒಮ್ಮತವು ಮುಖ್ಯವಾಗಿದೆ ಎಂದು ಹೇಳಿದರು.
ಅಧಿವೇಶನದ ಮಹತ್ವದ ಕುರಿತು ಮಾತನಾಡಿದ ಮೋದಿ, ಭಾರತೀಯ ನಾಗರಿಕರ ಕನಸುಗಳನ್ನು ನನಸಾಗಿಸಲು ಸಂಸತ್ತಿನ ಅಧಿವೇಶನಗಳು ನಮಗೆ ಒಂದು ಅವಕಾಶವಾಗಿದೆ. ಶ್ರೇಷ್ಠ ಭಾರತವನ್ನು ನಿರ್ಮಿಸಲು ಮತ್ತು 2047 ರ ವೇಳೆಗೆ ವಿಕಸಿತ ಭಾರತದ ನಮ್ಮ ಗುರಿಯನ್ನು ಸಾಧಿಸಲು ಇದು ನಮಗೆ ಒಂದು ಅವಕಾಶವಾಗಿದೆ ಎಂದರು.
ಪ್ರತಿಪಕ್ಷಗಳ ವಿರುದ್ಧ, ವಿಶೇಷವಾಗಿ ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಈ ದೇಶದ ಸಂವಿಧಾನದ ಘನತೆಗೆ ಮೀಸಲಾಗಿರುವವರಿಗೆ, ಭಾರತದ ಪ್ರಜಾಪ್ರಭುತ್ವ ಸಂಪ್ರದಾಯಗಳಲ್ಲಿ ನಂಬಿಕೆ ಇರುವವರಿಗೆ, ಜೂನ್ 25 ಮರೆಯಲಾಗದ ದಿನ ಎಂದು ಹೇಳಿದರು.