ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ನವದೆಹಲಿ, ಜೂನ್ 19: ರೇಮಂಡ್ಸ್ ಸಂಸ್ಥೆಯ ಛೇರ್ಮನ್ ಮತ್ತು ಎಂಡಿಯಾಗಿ ಮರು ಆಯ್ಕೆ ಬಯಸುತ್ತಿರುವ ಗೌತಮ್ ಸಿಂಘಾನಿಯಾ ವಿರುದ್ಧ ಮತ ಚಲಾಯಿಸುವಂತೆ ಐಐಎಎಸ್ ಸಂಸ್ಥೆ (IiAS) ಸಲಹೆ ನೀಡಿದೆ. ಜೂನ್ 27ರಂದು ರೇಮಂಡ್ಸ್ನ ವಾರ್ಷಿಕ ಮಹಾಸಭೆ ನಡೆಯಲಿದ್ದು, ಅಲ್ಲಿ ಷೇರುದಾರರಿಂದ ವೋಟಿಂಗ್ ಆಗಲಿದೆ. ಷೇರುದಾರರಿಗೆ ಸಲಹೆ ನೀಡುವ ಸಂಸ್ಥೆಯಾಗಿರುವ ಐಐಎಎಸ್, ರೇಮಂಡ್ಸ್ನಿಂದ ಗೌತಮ್ ಸಿಂಘಾನಿಯಾ ಹಾಗೂ ಅವರ ಪತ್ನಿ ನವಾಜ್ ಮೋದಿ ಅವರನ್ನು ಪದಚ್ಯುತಗೊಳಿಸುವಂತೆ ಕಂಪನಿಯ ನಿರ್ದೇಶಕರ ಮಂಡಳಿಗೂ ಸಲಹೆ ನೀಡಿದೆ. ಅವರಿಬ್ಬರ ಡಿವೋರ್ಸ್ ಪ್ರಕ್ರಿಯೆ ಅಂತಿಮಗೊಳ್ಳುವವರಿಗೂ ಅವರನ್ನು ಮಂಡಳಿಯಿಂದ ಹೊರಗಿಡಬೇಕು ಎಂಬುದು ಅದರ ಸಲಹೆ.
ಗೌತಮ್ ಸಿಂಘಾನಿಯಾ ಅವರು 1990ರ ಏಪ್ರಿಲ್ 1ರಿಂದ ರೇಮಂಡ್ಸ್ ನಿರ್ದೇಶಕ ಮಂಡಳಿಯಲ್ಲಿದ್ದಾರೆ. ತಮ್ಮ ತಂದೆ ಸ್ಥಾಪಿಸಿದ್ದ ಕಂಪನಿಯಿಂದ ಅವರನ್ನೇ ಹೊರಗೆ ಹಾಕಿದ ಅಪಖ್ಯಾತಿ ಗೌತಮ್ ಅವರಿಗಿದೆ. ಅವರ ತಂದೆ ವಿಜಯಪತ್ ಸಿಂಘಾನಿಯಾ ತಮ್ಮ ಬಹುತೇಕ ಆಸ್ತಿಯನ್ನು ಮಗನಿಗೆ ಧಾರೆ ಎರೆದುಕೊಟ್ಟು ಈಗ ಕೆಳಮಧ್ಯಮ ಮಟ್ಟದಲ್ಲಿ ಬದಕು ನೂಕುತ್ತಿದ್ದಾರೆ. ಇತ್ತೀಚೆಗೆ ಗೌತಮ್ ಸಿಂಘಾನಿಯಾ ತಮ್ಮ ಪತ್ನಿ ನವಾಜ್ ಮೋದಿಯನ್ನೂ ಮನೆಯಿಂದ ಹೊರಗಿಟ್ಟಿದ್ದಾರೆ. ಇಬ್ಬರ ಡಿವೋರ್ಸ್ ಪ್ರಕರಣ ಕೋರ್ಟ್ ಕಟಕಟೆಯಲ್ಲಿದೆ.
ಡಿವೋರ್ಸ್ಗೆ ಸಂಬಂಧಿತ ವ್ಯಾಜ್ಯಗಳು ಅಂತಿಮಗೊಳ್ಳುವವರೆಗೂ, ಮತ್ತು ಸ್ವತಂತ್ರ ತನಿಖೆಯ ಅಂಶಗಳು ಪ್ರಕಟವಾಗುವವರೆಗೂ ಗೌತಮ್ ಸಿಂಘಾನಿಯಾ ಮತ್ತು ನವಾಜ್ ಮೋದಿ ಅವರನ್ನು ಮಂಡಳಿಯಿಂದ ಹೊರಗಿಡಬೇಕೆಂದು ನಿರೀಕ್ಷಿಸುತ್ತೇವೆ,’ ಎಂದು ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ ಅಡ್ವೈಸರಿ ಸರ್ವಿಸಸ್ (IiAS) ಸಂಸ್ಥೆ ತಿಳಿಸಿದೆ.
ಗೌತಮ್ ಸಿಂಘಾನಿಯಾ ಅವರು ಐದು ವರ್ಷ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಮರು ಆಯ್ಕೆ ಬಯಸಿದ್ದಾರೆ. ಇದಕ್ಕೆ ರೇಮಂಡ್ಸ್ ಸಂಸ್ಥೆಯೂ ಒಪ್ಪಿದೆ. ಷೇರುದಾರರ ಅನುಮೋದನೆ ದೊರೆತರೆ ಸಿಂಘಾನಿಯಾ ರೇಮಂಡ್ಸ್ ಮುಖ್ಯಸ್ಥರಾಗಿ ಮುಂದುವರಿಯಲಿದ್ದಾರೆ.
ಗೌತಮ್ ಸಿಂಘಾನಿಯಾ ವಿರುದ್ಧ ತನಿಖೆ ಏನು?
ಗೌತಮ್ ಸಿಂಘಾನಿಯಾ ಅವರು ಕಂಪನಿಯ ಹಣವನ್ನು ವೈಯಕ್ತಿಕ ಕಾರ್ಯಗಳಿಗೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪವನ್ನು ಅವರ ಪತ್ನಿ ನವಾಜ್ ಮೋದಿ ಮಾಡಿದ್ದಾರೆ. ಈ ಬಗ್ಗೆ ಸ್ವತಂತ್ರ ತನಿಖೆ ಆರಂಭಗೊಂಡು ಪೂರ್ಣಗೊಳ್ಳುವವರೆಗೂ ಇಬ್ಬರನ್ನೂ ಮಂಡಳಿಯಿಂದ ಹೊರಗಿಡುವ ಜವಾಬ್ದಾರಿ ಷೇರುದಾರರಿಗಿದೆ ಎಂಬುದು ಐಐಎಎಸ್ನ ಅನಿಸಿಕೆ.
ಗೌತಮ್ ಸಿಂಘಾನಿಯಾ ಸಂಬಳವೂ ವಿವಾದದಲ್ಲಿ…
ರೇಮಂಡ್ಸ್ ಛೇರ್ಮನ್ ಮತ್ತು ಎಂಡಿಯಾಗಿ ಅವರು ಪಡೆಯುತ್ತಿರುವ ಸಂಬಳ ವಿಚಾರವೂ ಚರ್ಚಾಸ್ಪದವಾಗಿದೆ. 2023-24ರಲ್ಲಿ ಗೌತಮ್ ಸಿಂಘಾನಿಯಾ ಸಂಬಳ 20 ಕೋಟಿ ರೂ ಇದೆ. ಇದು ಇತರ ರೇಮಂಡ್ಸ್ ಉದ್ಯೋಗಿಗಳ ಸರಾಸರಿ ಸಂಬಳಕ್ಕಿಂತ 500 ಪಟ್ಟು ಹೆಚ್ಚು. ಇದು ನಿಯಮಕ್ಕೆ ವಿರುದ್ದವಾಗಿದೆ. ಈಗ 35 ಕೋಟಿ ರೂಗೆ ಸಂಬಳ ಹೆಚ್ಚಿಸಿಕೊಳ್ಳಲು ಹೊರಟಿದ್ದಾರೆ. ನಿಯಮದ ಪ್ರಕಾರ ಇದು ರೆಗ್ಯುಲೇಟರಿ ಲಿಮಿಟ್ಗಿಂತ ಐದು ಪರ್ಸೆಂಟ್ ಹೆಚ್ಚು ಎಂಬುದು ಪ್ರಾಕ್ಸಿ ಅಡ್ವೈಸರಿ ಸಂಸ್ಥೆಯಾಗಿರುವ ಐಐಎಎಸ್ನ ಆರೋಪ.