ದುರಹಂಕಾರಿಗಳನ್ನು ಭಗವಾನ್ ರಾಮ 241ಕ್ಕೆ ನಿಲ್ಲಿಸಿದ್ದಾನೆ: ಬಿಜೆಪಿಗೆ ಟಾಂಗ್ ಕೊಟ್ಟ ಆರೆಸ್ಸೆಸ್ ನಾಯಕ!
ನವದೆಹಲಿ (ಜೂ.14): ಇತ್ತೀಚೆಗೆ ಮುಗಿದ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ನೀರಸ ಪ್ರದರ್ಶನಕ್ಕೆ ಬಿಜೆಪಿ ನಾಯಕರ ದುರಹಂಕಾರವೇ ಕಾರಣ ಎಂದು ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕರಾದ ಆರೆಸ್ಸೆಸ್‌ನ ಹಿರಿಯ ನಾಯಕ ಇಂದ್ರೇಶ್ ಕುಮಾರ್ ಹೇಳಿದ್ದಾರೆ.
ಜೈಪುರ ಸಮೀಪದ ಕನೋಟಾದಲ್ಲಿ ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಇಂದ್ರೇಶ್ ಕುಮಾರ್, “ಶ್ರೀರಾಮನ ಭಕ್ತಿ ಮಾಡಿದವರು ಹಂತ ಹಂತವಾಗಿ ದುರಹಂಕಾರಿಯಾದರು. ಆ ಪಕ್ಷವನ್ನು ಅತಿದೊಡ್ಡ ಪಕ್ಷವೆಂದು ಘೋಷಿಸಲಾಯಿತು ಆದರೆ ದುರಹಂಕಾರದ ಕಾರಣದಿಂದ ಭಗವಾನ್ ರಾಮ ಇವರನ್ನು 241 ಕ್ಕೆ ನಿಲ್ಲಿಸಿದ” ಎಂದು ಹೇಳಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ 240 ಸ್ಥಾನಗಳನ್ನು ಗೆದ್ದರೂ ಬಹುಮತದ ಮಾರ್ಕ್ ದಾಟಲು ವಿಫಲವಾದ ಬಿಜೆಪಿಯನ್ನು ಈ ಮೂಲಕ ತಿವಿದಿದ್ದಾರೆ. 2014ರ ಲೋಕಸಭೆ ಚುನಾವಣೆಯ ಬಳಿಕ ಬಿಜೆಪಿಯ ಕೆಟ್ಟ ಪ್ರದರ್ಶನ ಇದಾಗಿದೆ.
ಇದರೊಂದಿಗೆ ಬಿಜೆಪಿ ನೇತೃತ್ವದ ಎನ್‌ಡಿಎಗೆ ನೇರ ವಿರೋಧಿಯಾಗಿದ್ದ ಇಂಡಿಯಾ ಬ್ಲಾಕ್‌ಅನ್ನು ಟೀಕಿಸಿದ ಇಂದ್ರೇಶ್ ಕುಮಾರ್, ಅವರ ರಾಮ ವಿರೋಧಿಗಳು ಎಂದು ಹೇಳಿದ್ದಾರೆ. ಪ್ರತಿಪಕ್ಷಗಳ ಮೈತ್ರಿಯನ್ನು ಹೆಸರಿಸದೆ, “ರಾಮನಲ್ಲಿ ನಂಬಿಕೆಯಿಲ್ಲದವರನ್ನು ಒಟ್ಟಾರೆಯಾಗಿ 234ಕ್ಕೆ ನಿಲ್ಲಿಸಲಾಗಿದೆ. ದೇವರ ನ್ಯಾಯವು ನಿಜ ಮತ್ತು ಆನಂದದಾಯಕವಾಗಿದೆ” ಎಂದು ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಬ್ಲಾಕ್ 234 ಸ್ಥಾನಗಳನ್ನು ಪಡೆದುಕೊಂಡಿದೆ.