ಬೆಂಗಳೂರು :ಜೂ.14): ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕಸ್ಟಡಿಯಲ್ಲಿರುವ ನಟ ದರ್ಶನ್‌ಗೆ ಸ್ಪೆಷಲ್ ಟ್ರೀಟ್‌ಮೆಂಟ್ ನೀಡುತ್ತಿರುವ ಬಗ್ಗೆ ಸಿಎಂ ಸಿದ್ಧರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದರ್ಶನ್‌ಗೆ ವಿಶೇಷ ಟ್ರೀಟ್‌ಮೆಂಟ್ ನೀಡುತ್ತಿರುವ ಬಗ್ಗೆ ಮಾಧ್ಯಮಗಳು ನಿರಂತರ ವರದಿ ಪ್ರಸಾರ ಮಾಡಿದ್ದವು. ಇಡೀ ಪೊಲೀಸ್ ಠಾಣೆಗೆ ಶಾಮಿಯಾನ ಹಾಕಲಾಗಿದ್ದರೆ, ಠಾಣೆಯ ಮೊದಲ ಮಹಡಿಯ ಬಾಲ್ಕನಿಗೂ ಶಾಮಿಯಾನಿ ಹಾಕಿ ದರ್ಶನ್‌ಗೆ ಸಿಗರೇಟ್ ಜೋನ್ ಮಾಡಿಕೊಟ್ಟಿದ್ದಾರೆ ಎನ್ನುವ ಆರೋಪಗಳಿದ್ದವು. ಇನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಎದುರಿನ ರಸ್ತೆಯನ್ನೂ ಕೂಡ ಪೊಲೀಸರು ಬಂಧಿಸಿದ್ದರು. ಈ ಎಲ್ಲಾ ವಿಚಾರಗಳು ಮಾಧ್ಯಮಗಳಲ್ಲಿ ವರದಿಯಾಗಿದ್ದು ಮಾತ್ರವಲ್ಲದೆ, ಸ್ಥಳೀಯ ಪ್ರದೇಶದ ನಿವಾಸಿಗಳು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು.
ದರ್ಶನ್ ಕೇಸ್ ನಲ್ಲಿ ಪೊಲೀಸರು ವಿಶೇಷ ಟ್ರೀಟ್ಮೆಂಟ್ ನೀಡುತ್ತಿದ್ದಾರೆ ಎಂಬ ವಿಚಾರಕ್ಕೆ ಸಿಎಂ ಸಿದ್ಧರಾಮಯ್ಯ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ನಡೆದುಕೊಳ್ಳುವ ರೀತಿಯ ಸರಿಯಿಲ್ಲ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಇಂದು ಬೆಳಿಗ್ಗೆ ಪೊಲೀಸ್ ಅಧಿಕಾರಿಗಳಿಂದ ಬ್ರೀಫಿಂಗ್ ವೇಳೆ ಸಿಎಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದರ್ಶನ್‌ಗೆ ಯಾಕೆ ಸ್ಪೆಷಲ್ ಟ್ರಿಟ್ಮೆಂಟ್ ನೀಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಒಬ್ಬ ಆರೋಪಿಗೆ ನೀಡಬೇಕಾದ ಟ್ರೀಟ್‌ಮೆಂಟ್ ಕೊಟ್ಟರೆ ಸಾಕು. ಯಾವುದೇ ಸ್ಪೆಷಲ್ ಟ್ರೀಟ್‌ಮೆಂಟ್ ನೀಡೋ ಅಗತ್ಯವಿಲ್ಲ. ಮಾಧ್ಯಮಗಳಲ್ಲಿ ಪೊಲೀಸ್ ಠಾಣೆ ಮುಚ್ಚಿದ್ದಾರೆ ಅಂತ ಸುದ್ದಿ ಆಗುತ್ತಿದೆ. What is personal interest ಎಂದು ಸಿಎಂ ಸಿದ್ಧರಾಮಯ್ಯ ಸಿಟ್ಟಾಗಿದ್ದಾರೆ. ಈ ವೇಳೆ ಪೊಲೀಸರು ದರ್ಶನ್ ಬೆಂಬಲಿಗರು ಬರಬಹುದು ಹಾಗೂ ಮಾಧ್ಯಮಗಳು ಆಗುವ ಪ್ರತಿ ಘಟನೆಯನ್ನೂ ಶೂಟ್ ಮಾಡ್ತಾರೆ ಅಂತ ಶಾಮಿಯಾನ ಹಾಕಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಇದಕ್ಕೆ ಸಿಎಂ, NO special treatment ಒಬ್ಬ ಆರೋಪಿಗೆ ಏನ್ ಟ್ರೀಟ್‌ಮೆಂಟ್ ಇದೆ ಅದನ್ನ ಕೊಡಿ ಎಂದು ಸ್ಪಷ್ಟವಾಗಿ ಸೂಚನೆ ನೀಡಿದ್ದಾರೆ.