``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

ಮಂಗಳೂರು: ಬೋಳಿಯಾರ್​ ಚೂರಿ ಇರಿತ ಪ್ರಕರಣ ದೊಡ್ಡದು ಮಾಡುವವರೇ ದೇಶದ್ರೋಹಿಗಳೆಂದ ಸ್ಪೀಕರ್ ಯುಟಿ ಖಾದರ್

ಮಂಗಳೂರು, ಜೂನ್ 14: ಬೋಳಿಯಾರ್​​ನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಪ್ರತಿಕ್ರಿಯಿಸಿದ್ದು, ಈ ಪ್ರಕರಣವನ್ನು ದೊಡ್ಡದು ಮಾಡುವವರೇ ದೇಶದ್ರೋಹಿಗಳು ಎಂದಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಬೋಳಿಯಾರ್ ಎಂಬುದು ಸಹೋದರತೆ ಇರುವ ಊರು. ಕೆಲವೇ ಕೆಲವು ಯುವಕರಿಂದ ಅಲ್ಲಿ ಕೆಟ್ಟ ಹೆಸರು ಬಂದಿದೆ. ಅದನ್ನು ಅಲ್ಲಿನವರು, ಊರಿನವರೇ ಸರಿಪಡಿಸುವ ಕೆಲಸ ಮಾಡುತ್ತಿದ್ದಾರೆ. ದಯವಿಟ್ಟು ಹೊರಗಿನವರು ಯಾರೂ ಶಾಂತಿ‌ ಕೆಡಿಸಬೇಡಿ. ಹೊರಗಿನವರು ಬಾಯಿ ಮುಚ್ಚಿ ಕೂರುವುದೇ ದೇಶ ಪ್ರೇಮ. ಹೊರಗಿನ ಎಲ್ಲರೂ ಅಲ್ಲಿ ಮೂಗು ತೂರಿಸುವ ಕೆಲಸ ಬಿಟ್ಟು ಬಿಡಿ ಎಂದರು.

ಭಾರತ್ ಮಾತಾ ಕೀ ಜೈ’ ಅಂತ ಎಲ್ಲಾ ದೇಶಭಕ್ತರು ಎಲ್ಲೂ ಹೇಳಬಹುದು. ಆದರೆ ಅಲ್ಲಿ ಬೇರೆ ಏನು ಅವಾಚ್ಯ ಶಬ್ದ ಬಳಸಿ ಬೈದಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಅಲ್ಲಿ ರಾಜಕೀಯ ಮಾಡಿದ್ರೆ ಯಾರಿಗೂ ಒಂದು ಓಟ್ ಹೆಚ್ಚಾಗಲ್ಲ. ಯಾವುದೇ ಪಕ್ಷಕ್ಕೂ ಅಲ್ಲಿ ಓಟ್ ಹೆಚ್ಚಾಗಲ್ಲ. ಎರಡು ಪಕ್ಷಗಳು ಸೇರಿ ನನ್ನನ್ನು ಚುನಾವಣೆಯಲ್ಲಿ ಸೋಲಿಸಲು ಪ್ರಯತ್ನಪಟ್ಟರು. ಅವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ನಾನೀಗ ಸ್ಪೀಕರ್, ಹಾಗಾಗಿ ಯಾವುದೇ ಪಕ್ಷದ ಹೆಸರು ಹೇಳಲ್ಲ. ಈ ವಿಚಾರ ಸುಮ್ಮನೆ ದೊಡ್ಡದು ಮಾಡುವವರೇ ದೇಶದ್ರೋಹಿಗಳು. ಪೊಲೀಸರಿಗೆ ಕೆಲಸ ಮಾಡಲು ಬಿಡಿ, ಅವರು ಎಲ್ಲವನ್ನೂ ಸರಿ‌ ಮಾಡುತ್ತಾರೆ ಎಂದರು.

ಬೋಳಿಯಾರ್ ಘಟನೆಯಲ್ಲಿ ಮೆರವಣಿಗೆ ಎಲ್ಲವೂ ಆಗಿದೆ. ಆದರೆ ಮತ್ತೆ ಮೂರು ಜನ ಬೈಕ್​​ನಲ್ಲಿ ಬಂದು ಸಮಸ್ಯೆ ಮಾಡಿದ್ದಾರೆ. ಆ ಬಳಿಕ ಅವರು ಬೈಕ್​​ನಲ್ಲಿ ಬಂದು ಮತ್ತೆ ಹಲ್ಲೆ ಮಾಡಿರುವುದು ದೊಡ್ಡ ತಪ್ಪು. ‘ಭಾರತ್ ಮಾತಾ ಕೀ ಜೈ’ ಎಲ್ಲೂ ಕೂಡ ಹೇಳಬಹುದು. ರಸ್ತೆ, ಮಸೀದಿ, ಎಲ್ಲೂ ನಾವು ಘೋಷಣೆ ಕೂಗಬಹುದು. ಆದರೆ, ಅವರು ಏನು ಹೇಳಿದ್ದಾರೆ ಎಂಬ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಬಗ್ಗೆ ಹೊರಗಿನವರು ಬಂದು ಮಾತನಾಡುವ ಅಗತ್ಯ ಇಲ್ಲ. ಎರಡೂ ಕಡೆಯ ತಪ್ಪಿನ ಬಗ್ಗೆ ಪೊಲೀಸರು ಸಿಸಿಟಿವಿ ನೋಡಿ ಕ್ರಮ ಕೈಗೊಳ್ಳುತ್ತಾರೆ. ಶಾಸಕನಾಗಿ ಶೇ 99ರಷ್ಟು ಸತ್ಪ್ರಜೆಗಳನ್ನ ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ಉಳಿದ ಶೇ 1 ರಷ್ಟು ಕೆಟ್ಟ ಜನರನ್ನು ‌ಪೊಲೀಸರು ನೋಡಿಕೊಳ್ಳುತ್ತಾರೆ ಎಂದು ಆಸ್ಪತ್ರೆಗೆ ಬೇಟಿ ನೀಡದೇ ಇರುವುದನ್ನು ಖಾದರ್ ಸಮರ್ಥಿಸಿಕೊಂಡರು.

ಪೊಲೀಸರು ತನಿಖೆಗೆ ಕಳೆದುಕೊಂಡು ಹೋಗಬಾರದು ಅಂದರೆ ಹೇಗೆ? ಆರೋಪಿಯ ಹೆಂಡತಿಯನ್ನು ಠಾಣೆಗೆ ಕರೆದು ವಿಚಾರಣೆ ಮಾಡಿ ಬಿಟ್ಟಿದ್ದಾರೆ. ಆದರೆ ಇದರ ವಿರುದ್ದ ಫೇಕ್ ವಾಯ್ಸ್ ಮೆಸೇಜ್ ಹರಡಿದ್ದು, ಜನರಲ್ಲಿ‌ ಗೊಂದಲ ಮೂಡುವಂತಾಗಿದೆ. ಅಲ್ಲಿನ ಜನರಿಗೆ ಯಾವುದೇ ಸಮಸ್ಯೆ ಇಲ್ಲ, ಹೊರಗಿನವರಿಗೆ ಸಮಸ್ಯೆ ಅಷ್ಟೆ. ನಾವು ಅಲ್ಲಿನ ಸಮಸ್ಯೆ ಬಗೆ ಹರಿಸಲು ಕೆಲಸ ಮಾಡಬೇಕು. ಅದು ಬಿಟ್ಟು ಅಲ್ಲಿನ ಸಮಸ್ಯೆ ಮತ್ತಷ್ಟು ಹೆಚ್ಚಿಸಲು ಹೋಗಬಾರದು. ನಾನು ಆಸ್ಪತ್ರೆಗೆ ಹೋಗಿಲ್ಲ, ಇಂಥದ್ದಕ್ಕೆ ನಾವು ಪ್ರೋತ್ಸಾಹ ಕೊಡಬಾರದು. ಆಸ್ಪತ್ರೆಯಲ್ಲಿ ಬಡವರಿದ್ದಾರೆ, ಅವರನ್ನು ‌ನಾವು ನೋಡಬೇಕು. ಅದು ಬಿಟ್ಟು ಸಮಸ್ಯೆ ಸೃಷ್ಟಿಸಿ, ಗಲಾಟೆ ಮಾಡಿ ಆಸ್ಪತ್ರೆಗೆ ದಾಖಲಾದವರನ್ನು ನೋಡೋದಲ್ಲ. ಅವರನ್ನು ಅವರಷ್ಟಕ್ಕೆ ಬಿಡಿ, ಅವರು ಅಲ್ಲಿಗೆ ಸರಿಯಾಗುತ್ತಾರೆ. ನಾವು ರಾಜಕಾರಣಿಗಳು ಇಂಥದ್ದಕ್ಕೆ ತಲೆ ಹಾಕಲೇಬಾರದು. ನನಗೆ ನನ್ನ ಕ್ಷೇತ್ರದ ಎಲ್ಲರೂ ಆತ್ಮೀಯರೇ, ಆದರೆ ತಪ್ಪು ಮಾಡಿದವರಿಗೆ ಸಪೋರ್ಟ್ ಮಾಡಲ್ಲ. ಈ ವಿಷಯದಲ್ಲಿ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ನಾನು ಆಸ್ಪತ್ರೆಗೆ ಭೇಟಿ ನೀಡಿದರೆ‌ ಮತ್ತೆ ಗೊಂದಲ ಆಗುತ್ತದೆ. ನನ್ನನ್ನೂ ಸೇರಿಸಿ ರಾಜಕೀಯದವರು ಅಲ್ಲಿಗೆ ಹೋಗಲೇಬಾರದು ಎಂದು ಖಾದರ್ ಹೇಳಿದರು.

ಸಚಿವ ಸ್ಥಾನ ಸಿಗುತ್ತಾ?

ಸ್ಪೀಕರ್ ಸ್ಥಾನದ ಬದಲಾಗಿ ಸಚಿವ ಸ್ಥಾನ ಸಿಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಹಣೆ ಬರಹ ಎಲ್ಲಿಗೆ ಕರೆದುಕೊಂಡು ಹೋಗುತ್ತದೆಯೋ ಗೊತ್ತಿಲ್ಲ. ನಾನು ಹಿಂದೆ ಎಣಿಸಿದ್ದೆ, ನಮ್ಮ ಶ್ರಮ ನಮ್ಮನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತದೆ ಅಂತ. ಆದರೆ, ಈಗ ನನಗೆ ಅಶೀರ್ವಾದ ಕೂಡ ಹೆಚ್ಚಾಗಿ ಬೇಕು ಎಂಬುದು ಗೊತ್ತಾಗಿದೆ. ಶಾಸಕ, ಮಂತ್ರಿ, ಸ್ಪೀಕರ್ ಎಲ್ಲದರಲ್ಲೂ ನಾನು ಖುಷಿಯಾಗಿದ್ದೇನೆ. ನನಗೆ ಸ್ಥಾನ ಮುಖ್ಯವಲ್ಲ, ನಾವು ಕೆಲಸ ಮಾಡೋದು‌ ಮುಖ್ಯ. ನಾನು ಮಾಜಿಯಾದ್ರೂ ಬಹಳ ಸಂತೋಷವಾಗಿ ಕೆಲಸ ಮಾಡ್ತೇನೆ. ನಾನು ಎಲ್ಲರ ಆಶೀರ್ವಾದದಿಂದ ಸ್ಪೀಕರ್ ಆಗಿ ಖುಷಿಯಾಗಿದ್ದೇನೆ. ಮೇಲೆ ಹೋದರೂ ಕೆಳಗೆ ಇಳಿದರೂ ನಾನು ಖುಷಿಯಲ್ಲಿ ಇದ್ದೇನೆ. ಅಧಿಕಾರ ಶಾಶ್ವತ ಅಲ್ಲ ಎಂಬುದು ನನಗೆ ಪ್ರತೀ ನಿತ್ಯ ಗೊತ್ತಿದೆ ಎಂದರು.

ಕ್ಷೇತ್ರದಲ್ಲಿ 24 ಗಂಟೆ ಕುಡಿಯುವ ನೀರಿನ ಯೋಜನೆ ಬಗ್ಗೆ ಚುನಾವಣೆ ವೇಳೆ ಭರವಸೆ ನೀಡಿದ್ದೆ. ಇದರ ಮೊದಲ ಹಂತದ ಕೆಲಸ ಈಗ ಪೂರ್ಣಗೊಂಡಿದೆ. ಇಡೀ ಉಳ್ಳಾಲ ನಗರಕ್ಕೆ 70 ಲಕ್ಷ ಲೀಟರ್ ನೀರಿನ ಸಿಂಗಲ್ ಟ್ಯಾಂಕ್ ಆಗಿದೆ. ನಗರಾಭಿವೃದ್ಧಿ ಸಚಿವನಾಗಿದ್ದಾಗ ಬಿಡುಗಡೆಯಾದ 249 ಕೋಟಿ ರೂಪಾಯಿಯ ಕೆಲಸ ಆಗಿದೆ. ಇನ್ನು ಮನೆ ಮನೆಗಳಿಗೆ ನೀರು ಪೂರೈಕೆ ಕೆಲಸ ಆಗಬೇಕಿದೆ. ಇದಕ್ಕಾಗಿ 386 ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ. ಮೊದಲ ಹಂತದ ಉದ್ಘಾಟನೆ ಹಾಗೂ ಎರಡನೇ ಹಂತದ ಚಾಲನೆಗೆ ಸಿಎಂ ಸಿದ್ದರಾಮಯ್ಯ ಬರುತ್ತಾರೆ. ಶೀಘ್ರದಲ್ಲೇ ಸಿಎಂ ಇದರ ಉದ್ಘಾಟನೆ ಮಾಡಲಿದ್ದಾರೆ ಎಂದರು.

ರಸ್ತೆ, ವಿದ್ಯುತ್, ಶಿಕ್ಷಣಕ್ಕೆ ಅನುದಾನ ಮೀಸಲಿಡಲಾಗಿದೆ. ಅಬ್ಬಕ್ಕ ಭವನ ಹಾಗೂ ಬ್ಯಾರಿ ಭವನದ ಕೆಲಸ ಅಗಲಿದೆ. ಕಡಲ್ಕೊರೆತ ಸಂಬಂಧ ಎನ್ಐಟಿಕೆ ಅಧ್ಯಯನದ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು. ಅದರ ಮೇಲೆ ಸರ್ಕಾರದ ಜೊತೆ ಮಾತನಾಡಿ ಕೆಲಸ ಮಾಡಲಾಗುವುದು ಎಂದು ಖಾದರ್ ತಿಳಿಸಿದರು.

ಬಾಂಬೆಯಿಂದ ಕೊಚ್ಚಿ ಹೋಗುವ ಕ್ರೂಸ್​​ಗೆ ಮಂಗಳೂರಿನಲ್ಲಿ ನಿಲುಗಡೆಗೆ ವ್ಯವಸ್ಥೆ ಬೇಕಾಗಿದೆ. ಸೋಮೇಶ್ವರದಲ್ಲಿ ಟೂರಿಸಂ ಬಂದರು ನಿರ್ಮಾಣದ ಯೋಜನೆ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಾನು ಸಚಿವನಾಗಿದ್ದಾಗ ಜಿಲ್ಲೆಯಲ್ಲಿ ಎಲ್ಲಾ ಸ್ಕಿಲ್ ಗೇಮ್, ಮಸಾಜ್ ಪಾರ್ಲರ್ ಬಂದ್ ಮಾಡಿಸಿದ್ದೇನೆ. ತುಂಬಾ ಒತ್ತಡ ಇದ್ದರೂ ನಾನು ಎಲ್ಲ ಅಕ್ರಮಗಳನ್ನು ಬಂದ್ ಮಾಡಿಸಿದ್ದೆ. ನಾನು ಸಚಿವ ಆಗಿದ್ದಾಗ ಎಲ್ಲವೂ ಸಂಪೂರ್ಣ ಬಂದ್ ಆಗಿತ್ತು. ಆದರೆ ಹೊಸ ಸರ್ಕಾರ ಬಂದು ಮತ್ತೊಬ್ಬರು ಸಚಿವರಾದರು. ಆಗ ಯಾರು ಅದನ್ನ ನಿಲ್ಲಿಸೋ ಕೆಲಸ ಮಾಡಿಲ್ಲ. ಈಗ ನನ್ನ ಕ್ಷೇತ್ರದಲ್ಲಿ ಅದನ್ನ ನಿಲ್ಲಿಸಿದ್ದೇನೆ, ಯಾವುದೇ ಅಕ್ರಮ ಇಲ್ಲ. ಉಳಿದಂತೆ‌ ಬೇರೆ ಕಡೆ ಇದ್ದರೆ ಅದಕ್ಕೆ ನಾನು ಏನು ಮಾಡುವುದು? ನಾನು ಅಧಿಕಾರ ಇದ್ದಾಗ ಸಂಪೂರ್ಣ ಕೆಲಸ ಮಾಡಿದ್ದೇನೆ ಎಂದು ಅವರು ಹೇಳಿದರು.

No Comments

Leave A Comment