Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಲೋಕಸಭೆ ಫಲಿತಾಂಶ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ ಪರೋಕ್ಷ ಅಸಮಾಧಾನ

ಬೆಳಗಾವಿ, ಜೂನ್ 5: ಲೋಕಸಭೆ ಚುನಾವಣೆಯಲ್ಲಿ  ಕರ್ನಾಟಕದಲ್ಲಿ ಕಾಂಗ್ರೆಸ್  ಎರಡಂಕಿ ತಲುಪಲು ಸಾಧ್ಯವಾಗದೇ ಇರುವ ಬಗ್ಗೆ ಪಕ್ಷದ ಆಂತರಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ಇದೀಗ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಕೂಡ ಆ ಬಗ್ಗೆ ಮಾತನಾಡಿದ್ದು, ಡಬಲ್ ಡಿಜಿಟ್ ತಲುಪದೇ ಇರುವುದಕ್ಕೆ ನಮ್ಮ ನಾಯಕರ ಓವರ್ ಕಾನ್ಫಿಡೆನ್ಸೇ ಕಾರಣ ಎಂದು ಹೇಳಿದ್ದಾರೆ. ಈ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗೋಕಾಕ್ ನಗರದಲ್ಲಿ ಮಾತನಾಡಿದ ಅವರು, ಡೈರೆಕ್ಟರ್, ಪ್ರೊಡ್ಯೂಸರ್ ಫೇಲ್ ಆದರೆ ಈ ರೀತಿಯ ಫಲಿತಾಂಶ ನಿರೀಕ್ಷಿತ. ಚುನಾವಣೆಗೆ ಸಮಯ ಕಡಿಮೆ ಇರುತ್ತದೆ, ಆ ಸಮಯದಲ್ಲಿ ಅಲರ್ಟ್ ಆಗಿ ಇರಬೇಕು. ಇಲ್ಲವಾದರೆ ಚುನಾವಣೆ ಬಂದು ಹೋಗುತ್ತದೆ, ಆಗಲೇ ನಾವು ಕೆಲಸ ಮಾಡಬೇಕು. ನಮ್ಮ ನಾಯಕರು ಹಲವು ಕ್ಷೇತ್ರಗಳನ್ನು ನಿರ್ಲಕ್ಷಿಸಿದ್ದೂ ನಮ್ಮ ಹಿನ್ನಡೆಗೆ ಕಾರಣ ಎಂದು ಅವರು ಹೇಳಿದರು.

ಗೆಲ್ಲುವ ಅತಿಯಾದ ವಿಶ್ವಾಸದ ಕಾರಣಕ್ಕೆ ಇನ್ನೂ ಹಲವು ಕ್ಷೇತ್ರಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರಚಾರ ಆಗಲಿಲ್ಲ. ಕೆಲವಡೆ ಕಡಿಮೆ ಮತಗಳ ಅಂತರದಿಂದ ಸೋಲಲು ನಮ್ಮ ನಿರ್ಲಕ್ಷ್ಯವೇ ಕಾರಣ ಎಂದು ಅವರು ಹೇಳಿದ್ದಾರೆ. ಆಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಹಿನ್ನಡೆಗೆ ಅಧ್ಯಕ್ಷರೇ ಕಾರಣ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ನಾಯಕತ್ವ ಬದಲಾವಣೆ ಕೂಗಿನ ಜತೆಗೆ ಉನ್ನತಾಧಿಕಾರ ರಚನೆಗೆ ಒತ್ತಾಯ ಹೆಚ್ಚಾಗುವ ಸಾಧ್ಯತೆ ಇದೆ. ಈ ಮಧ್ಯೆ, ಆಕಾಂಕ್ಷಿಗಳು ಸಚಿವ ಸ್ಥಾನಕ್ಕೆ ಬೇಡಿಕೆ ಇಡಲಿದ್ದಾರೆ. ಪರಿಣಾಮವಾಗಿ ಸಚಿವರ ಖಾತೆಗಳು ಅದಲು ಬದಲಾದರೂ ಆಗಬಹುದು. ಸಮುದಾಯವಾರು ಡಿಸಿಎಂ ಹುದ್ದೆಗಳ ಸೃಷ್ಟಿಗೆ ಮತ್ತೆ ಒತ್ತಾಯ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದ್ದವು. ಇದರ ಬೆನ್ನಲ್ಲೇ ಸತೀಶ್ ಜಾರಕಿಹೊಳಿ ಹೇಳಿಕೆ ಮೂಡಿಬಂದಿದೆ.

ಅಂದಹಾಗೆ, ಸತೀಶ್ ಜಾರಕಿಹೊಳಿ ಮತ್ತು ಡಿಕೆ ಶಿವಕುಮಾರ್ ಬಣಗಳ ನಡುವಣ ಶೀತಲ ಸಮರ ಕೆಲವು ತಿಂಗಳುಗಳ ಹಿಂದೆ ವ್ಯಾಪಕವಾಗಿ ಚರ್ಚೆಗೀಡಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಬೆಳಗಾವಿ ರಾಜಕಾರಣದಲ್ಲಿ ಹೊರಗಿನವರ ಹಸ್ತಕ್ಷೇಪ ಹೆಚ್ಚಾಗುತ್ತಿದೆ ಎಂದು ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ಡಿಕೆ ಶಿವಕುಮಾರ್ ವಿರುದ್ಧ ಅಂದು ಅಸಮಾಧಾನ ವ್ಯಕ್ತಪಡಿಸಿದ್ದರು.

No Comments

Leave A Comment