ಮುಂಬಯಿ: ಬಹು ಮಹಡಿ ಕಟ್ಟಡದಿಂದ ಜಿಗಿದು ಹಿರಿಯ IAS ಅಧಿಕಾರಿ ದಂಪತಿ ಪುತ್ರಿ ಆತ್ಮಹತ್ಯೆ
ಮುಂಬೈ: ಐಎಎಸ್ ಹಿರಿಯ ಅಧಿಕಾರಿಗಳ ಪುತ್ರಿಯೊಬ್ಬಳು ಸೋಮವಾರ ಮುಂಜಾನೆ ಮುಂಬೈನ ಬಹುಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರ ಕೇಡರ್ IAS ಅಧಿಕಾರಿಗಳಾದ ರಾಧಿಕಾ ಮತ್ತು ವಿಕಾಸ್ ರಸ್ತೋಗಿ ಅವರ ಪುತ್ರಿ 27 ವರ್ಷದ ಲಿಪಿ ರಸ್ತೋಗಿ ಆತ್ಮಹತ್ಯೆಗೆ ಶರಣಾದ ಯುವತಿ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಿಸದೇ ಆಕೆ ಮೃತಪಟ್ಟಿದ್ದಾಳೆ.ಕಾನೂನು ವಿದ್ಯಾರ್ಥಿನಿಯಾಗಿದ್ದ ಲಿಪಿ, ಇಂದು ಮುಂಜಾನೆ 4 ಗಂಟೆ ಸುಮಾರಿಗೆ ರಾಜ್ಯ ಸಚಿವಾಲಯದ ಬಳಿಯ ಕಟ್ಟಡದ 10ನೇ ಮಹಡಿಯಿಂದ ಜಿಗಿದಿದ್ದಾರೆ. ಆಕೆಯ ಕೋಣೆಯಲ್ಲಿ ಡೆತ್ ನೋಟ್ ಒಂದು ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಿಪಿ ಹರಿಯಾಣದ ಸೋನೆಪತ್‌ನಲ್ಲಿ ಕಾನೂನು ವ್ಯಾಸಾಂಗ ಮಾಡುತ್ತಿದ್ದಳು. ಪೊಲೀಸ್ ಅಧಿಕಾರಿಗಳ ಪ್ರಕಾರ, ಅವಳು ಪರೀಕ್ಷೆಗಳ ಬಗ್ಗೆ ಆತಂಕದಲ್ಲಿದ್ದಳು ಎಂದು ಹೇಳಲಾಗುತ್ತಿದೆ. ವಿಕಾಸ್ ರಸ್ತೋಗಿ ಮಹಾರಾಷ್ಟ್ರದ ಶಿಕ್ಷಣ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದರೆ, ರಾಧಿಕಾ ರಸ್ತೋಗಿ ರಾಜ್ಯದ ಗೃಹ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.2017 ರಲ್ಲಿ ಇದೇ ರೀತಿಯ ಪ್ರಕರಣದಲ್ಲಿ ಮಹಾರಾಷ್ಟ್ರ ಕೇಡರ್ ಐಎಎಸ್ ಅಧಿಕಾರಿಗಳಾದ ಮಿಲಿಂದ್ ಮತ್ತು ಮನೀಶಾ ಮ್ಹೈಸ್ಕರ್ ಅವರ 18 ವರ್ಷದ ಮಗ ಬಹುಮಹಡಿ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ.