Remal Cyclone-ಮಿಜೋರಾಂ: ಕಲ್ಲು ಕ್ವಾರಿ ಕುಸಿದು ಬಿದ್ದು 10ಮಂದಿ ಸಾವು, ಹಲವರು ನಾಪತ್ತೆ
ಐಜ್ವಾಲ್ ಜಿಲ್ಲೆ(ಮಿಜೋರಂ): ಮಿಜೋರಾಂನಲ್ಲೂ ರೆಮಲ್ ಚಂಡಮಾರುತದ ಅಬ್ಬರ ಹೆಚ್ಚಾಗಿದೆ, ಇಂದು ಮಂಗಳವಾರ ಬೆಳಗ್ಗೆ ಎಡೆಬಿಡದೆ ಸುರಿಯುತ್ತಿರುವ ಮಳೆಯ ನಡುವೆ ಮಿಜೋರಾಂನ ಐಜ್ವಾಲ್ ಜಿಲ್ಲೆಯಲ್ಲಿ ಕಲ್ಲಿನ ಕ್ವಾರಿ ಕುಸಿದು 10 ಮಂದಿ ಮೃತಪಟ್ಟು ಹಲವರು ಕಾಣೆಯಾಗಿದ್ದಾರೆ.
ಐಜ್ವಾಲ್ ಪಟ್ಟಣದ ದಕ್ಷಿಣ ಹೊರವಲಯದಲ್ಲಿರುವ ಮೆಲ್ತುಮ್ ಮತ್ತು ಹ್ಲಿಮೆನ್ ನಡುವಿನ ಪ್ರದೇಶದಲ್ಲಿ ಬೆಳಗ್ಗೆ 6 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ. ಏಳು ಜನರ ಮೃತದೇಹ ಪತ್ತೆಯಾಗಿದ್ದು, ಇನ್ನೂ ಹಲವರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾರೀ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ.
ಮಳೆಯಿಂದಾಗಿ ರಾಜ್ಯದ ಹಲವೆಡೆ ಭೂಕುಸಿತ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹುಂತಾರ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 6 ರಲ್ಲಿ ಭೂಕುಸಿತದಿಂದಾಗಿ ಐಜ್ವಾಲ್ ದೇಶದ ಇತರ ಭಾಗಗಳಿಂದ ಸಂಪರ್ಕ ಕಡಿತಗೊಂಡಿದೆ ಎಂದು ಅವರು ಹೇಳಿದರು. ಇದಲ್ಲದೆ, ಹಲವಾರು ಅಂತಾರಾಜ್ಯ ಹೆದ್ದಾರಿಗಳು ಭೂಕುಸಿತದಿಂದ ಸಂಪರ್ಕ ಕಡಿದುಕೊಂಡಿವೆ.
ಮಳೆಯ ಕಾರಣ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ. ಅಗತ್ಯ ಸೇವೆಗಳನ್ನು ಒದಗಿಸುವವರನ್ನು ಹೊರತುಪಡಿಸಿ ಸರ್ಕಾರಿ ನೌಕರರನ್ನು ಮನೆಯಿಂದಲೇ ಕೆಲಸ ಮಾಡಲು ತಿಳಿಸಲಾಗಿದೆ.