ಪಪುವಾ ನ್ಯೂಗಿನಿಯಾದಲ್ಲಿ ಭೂಕುಸಿತ: ಸಾವಿನ ಸಂಖ್ಯೆ 2,000ಕ್ಕೆ ಏರಿಕೆ
ಪೋರ್ಟ್ ಮೊರ್‌ಸ್ಬಿ, ಮೇ 27: ಪಪುವಾ ನ್ಯೂಗಿನಿಯಾದಲ್ಲಿ ಸಂಭವಿಸಿದ ಭಯಾನಕ ಭೂಕುಸಿದಿಂದ 2,000ಕ್ಕೂ ಅಧಿಕ ಮಂದಿ ಮಣ್ಣಿನಲ್ಲಿ ಹಾಗೂ ಅವಶೇಷಗಳ ಅಡಿಯಲ್ಲಿ ಜೀವಂತ ಸಮಾಧಿ ಆಗಿದ್ದಾರೆ.
ಭಾನುವಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರವು ಸುಮಾರು 670 ಮಂದಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿತ್ತು. ಆದರೀಗ ಇಂದು ವಿಶ್ವಸಂಸ್ಥೆಗೆ ಬರೆದ ಪತ್ರದಲ್ಲಿ 2,000ಕ್ಕೂ ಅಧಿಕ ಮಂದಿ ಸಾವನ್ನಪ್ಪಿರಬಹುದು. ಅಲ್ಲದೇ ಕಟ್ಟಡಗಳು ನಾಶವಾಗಿವೆ, ಆಹಾರ ಬೆಳೆಗಳು ನಾಶವಾಗಿದ್ದು ದೇಶದ ಆರ್ಥಿಕತೆಯ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ತಿಳಿಸಿದೆ.
ಭೂಕುಸಿತ ಉಂಟಾದ ಎಂಗಾ ಪ್ರಾಂತ್ಯದ ಯಂಬಾಳಿ ಗ್ರಾಮದ ಸುತ್ತಮುತ್ತ ಸುಮಾರು 4,000 ಮಮದಿ ವಾಸಿಸುತ್ತಿದ್ದರು. ಈ ಪೈಕಿ 1,250 ಮಂದಿ ಆಶ್ರಯ ಕಳೆದುಕೊಂಡಿದ್ದಾರೆ. ಇನ್ನು ಭೂಕುಸಿತಕ್ಕೆ ಮನೆಗಳು ಸುಮಾರು 26.3 ಅಡಿಗಳಷ್ಟು ಆಳಕ್ಕೆ ಹೂತುಹೋಗಿವೆ. ಭೂಕುಸಿತ ಇನ್ನೂ ಮುದುವರಿದ ಕಾರಣ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಲೇ ಇದೆ.
ಭೂಕುಸಿತ ಉಂಟಾದ ಸ್ಥಳದಲ್ಲಿ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಕಲ್ಲುಮಣ್ಣಿನ ಅಡಿ, ಅವಶೇಷಗಳ ಅಡಿ ಸಿಲುಕಿದ ನೂರಾರು ಜನರಿಗಾಗಿ ರಕ್ಷಣಾ ತಂಡಗಳು ಹುಡುಕಾಟ ಮುಂದುವರಿಸಿದೆ.