Log In
BREAKING NEWS >
````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಹಾಗೂ ಓದುಗರಿಗೆ ಶ್ರೀ ಗೌರಿ-ಗಣೇಶನ ಹಬ್ಬದ ಶುಭಾಶಯಗಳು```````

ಹಾಸನದಲ್ಲಿ ಭೀಕರ ರಸ್ತೆ ಅಪಘಾತ, ಮಗು ಸೇರಿದಂತೆ 6 ಜನ ಸಾವು

ಹಾಸನ, ಮೇ 26: ಬೆಳ್ಳಂಬೆಳಗ್ಗೆ ಹಾಸನ ಹೊರವಲಯದ ಕಂಡ್ಲಿ ಈಚನಹಳ್ಳಿ ಗ್ರಾಮ ಬಳಿಯ ಬೆಂಗಳೂರು-ಮಂಗಳೂರು ಹೆದ್ದಾರಿ NH 75ನಲ್ಲಿ ಕಾರು ಹಾಗೂ ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಮಗು ಸೇರಿದಂತೆ ಆರು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಾರಾಯಣಪ್ಪ, ಸುನಂದಾ, ರವಿಕುಮಾರ್, ನೇತ್ರ, ಚೇತನ್ ಮತ್ತು ಕಾರು ಚಾಲಕ ರಾಕೇಶ್ ಮೃತ ದುರ್ದೈವಿಗಳು. ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜು ಆಗಿದೆ.  ಸ್ಥಳಕ್ಕೆ ಹಾಸನ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ (SP) ಮಹಮದ್ ಸುಜೇತಾ ಭೇಟಿ ನೀಡಿದ್ದಾರೆ. ಹಾಸನ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ ಮೂಲದ ಆರು ಜನ, ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಕರನ್ನು ಭೇಟಿಯಾಗಿ, ವಾಪಸ್ ಊರಿಗೆ ಹೋಗುತ್ತಿದ್ದರು. ನಸುಕಿನ ಜಾವ ಈಚನಹಳ್ಳಿ ಬಳಿ ನಿದ್ದೆ ಮಂಪರಿನಲ್ಲಿ ಅಪಘಾತ ಸಂಭವಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.ಕಾರು ಮನೋಜ್ ಕುಮಾರ್ ಎಂಬುವರಿಗೆ ಸೇರಿದೆ.

ಕಾರು ಹಾಗೂ ಕಾರಿನಲ್ಲಿ ಇದ್ದವರ ಬಗ್ಗೆ ತಕ್ಷಣ ವಿಳಾಸ ಪತ್ತೆ ಹಚ್ಚಿ ಎಂದು ಚಿಕ್ಕಬಳ್ಳಾಫುರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಿಎಲ್ ನಾಗೇಶ ಹಾಗೂ ಆರ್​ಟಿಒ ಅಧಿಕಾರಿಗಳಿಗೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್  ಮನವಿ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಕಾರಳ್ಳಿ ಗ್ರಾಮದ ನಾರಾಯಣಪ್ಪ, ಸುನಂದಾ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಂದರಹಳ್ಳಿ ಗ್ರಾಮದ ನೇತ್ರಾ ಹಾಗೂ ರವಿಕುಮಾರ್ ದಂಪತಿ ಹಾಗೂ ಪುತ್ರ ಚೇತನ್ ಒಂದೇ ಕುಟುಂಬದವರು. ಕುಟುಂಬಸ್ಥರು, ಪಾಶ್ವವಾಯುಗೆ ತುತ್ತಾಗಿದ್ದ ನಾರಾಯಣಪ್ಪ ಅವರಿಗೆ ಚಿಕಿತ್ಸೆ ಕೊಡಿಸಲೆಂದು KA-53-C. 1419 ನಂಬರ್​ನ ಇಟಿಯೋಸ್​ ಬಾಡಿಗೆ ಕಾರು ಮಾಡಿಕೊಂಡು ಮಂಗಳೂರಿಗೆ ಹೋಗಿದ್ದರು.

ಚಿಕಿತ್ಸೆ ಪಡೆದು ವಾಪಸ್ಸು ಬೆಂಗಳೂರಿನ ಕಡೆಗೆ ಬರುವಾಗ ಬೆಳಗಿನ ಜಾವ ನಿದ್ದೆ ಮಂಪರಿನಲ್ಲಿ ಕಾರು ಚಾಲಕನ ಅಜಾಗರೂಕತೆಯಿಂದ ರಸ್ತೆಯ ಡಿವೈಡರ್​ಗೆ ಡಿಕ್ಕಿ ಹೊಡೆದು ಪಕ್ಕದ ಲೇನ್​ಗೆ ಹಾರಿ ಕಂಟೇನರ್​ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರು ನಜ್ಜುಗುಜ್ಜಾಗಿದೆ.

ಘಟನೆ ಸಂಬಂಧ ಮೃತ ನಾರಾಯಣಪ್ಪ ಸಂಬಂಧಿ ಶ್ರೀನಿವಾಸ್ ಮಾತನಾಡಿ, ನಾರಾಯಣಪ್ಪ ಪಾಶ್ವವಾಯುಗೆ ತುತ್ತಾದ ಹಿನ್ನೆಲೆಯಲ್ಲಿ ಮದ್ದು ತೆಗೆದುಕೊಂಡು ಬರಲು ಕುಟುಂಬಸ್ಥರು ಮಂಗಳೂರಿಗೆ ಹೋಗಿದ್ದರು. ಬಾಡಿಗೆ ಕಾರು ಮಾಡಿ ಮೊನ್ನೆ ರಾತ್ರಿ ಕಳುಹಿಸಲಾಗಿತ್ತು. ವಾಪಸ್ ಬರುವಾಗ ದುರ್ಘಟನೆ ನಡೆದಿದೆ ಎಂದರು.

ಕಾರಿನ ಮಾಲಿಕ ಮನೋಜ್ ಕುಮಾರ್ ಮಾತನಾಡಿ, ಚಿಕ್ಕಬಳ್ಳಾಫುರದಿಂದ ಮೊನ್ನೆ ರಾತ್ರಿ ಕಾರು ಮಂಗಳೂರಿಗೆ ಬಾಡಿಗೆ ಹೋಗಿದೆ. ದೇವನಹಳ್ಳಿ ತಾಲೂಕಿನ ಕಾರಹಳ್ಳಿ ನಿವಾಸಿ ನಾರಾಯಣಪ್ಪ ಬಾಡಿಗೆ ಪಡೆದಿದ್ದರು. ಮಂಗಳೂರಿಗೆ ಹೋಗಿ ಬರಲು ಕಾರು ಬಾಡಿಗೆ ಪಡೆದಿದ್ದರು. ಕಾರಿನ ಚಾಲಕನಾಗಿ ಕೊಂಡೇನಹಳ್ಳಿ ನಿವಾಸಿ ರಾಕೇಶನನ್ನು ಕಳುಹಿಸಲಾಗಿತ್ತು ಎಂದು ತಿಳಿಸಿದರು.

No Comments

Leave A Comment