ಶ್ರೀಲಂಕಾದಿಂದ ಬಂದ ನಾಲ್ವರು ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ಬಂಧಿಸಿದ ಗುಜರಾತ್ ಎಟಿಎಸ್
ಅಹಮದಾಬಾದ್: ಇಲ್ಲಿನ ಸರ್ದಾರ್ ವಲ್ಲಭಾಯಿ ಪಟೇಲ್ ವಿಮಾನ ನಿಲ್ದಾಣದಲ್ಲಿ ಇಸ್ಲಾಮಿಕ್ ಸ್ಟೇಟ್‌ನ ನಾಲ್ವರು ಭಯೋತ್ಪಾದಕರನ್ನು ಬಂಧಿಸಿರುವುದಾಗಿ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಸೋಮವಾರ ತಿಳಿಸಿದೆ.
ಎಟಿಎಸ್ ನೀಡಿರುವ ಸಂಕ್ಷಿಪ್ತ ಟಿಪ್ಪಣಿಯಲ್ಲಿ, ವಿಮಾನ ನಿಲ್ದಾಣದಲ್ಲಿ ಬಂಧಿಸಲಾದ ನಾಲ್ವರು ಆರೋಪಿಗಳು ಶ್ರೀಲಂಕಾದ ಪ್ರಜೆಗಳಾಗಿದ್ದು, ಇಸ್ಲಾಮಿಕ್ ಸ್ಟೇಟ್‌ನ ಭಯೋತ್ಪಾದಕರು ಎಂದು ಹೇಳಿದೆ.
ಮೂಲಗಳ ಪ್ರಕಾರ, ಪಾಕಿಸ್ತಾನದ ಏಜೆಂಟರು ದಾಳಿಯಲ್ಲಿ ಬಳಸಬಹುದಾದ ಕೆಲವು ಶಸ್ತ್ರಾಸ್ತ್ರಗಳನ್ನು ಅವರಿಗೆ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಶಂಕಿತ ಉಗ್ರರು ಅದಕ್ಕೂ ಮೊದಲೇ ಸಿಕ್ಕಿಬಿದ್ದಿದ್ದಾರೆ.
ಬಂಧಿತ ನಾಲ್ವರು ಶ್ರೀಲಂಕಾದಿಂದ ಚೆನ್ನೈ ಮೂಲಕ ಅಹಮದಾಬಾದ್ ತಲುಪಿದ್ದಾರೆ ಎನ್ನಲಾಗಿದೆ. ಗುರಿ ತಲುಪುವ ಮುನ್ನವೇ ಅವರನ್ನು ಎಟಿಎಸ್ ಬಂಧಿಸಿದೆ.
ಈ ಬಂಧನಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಎಟಿಎಸ್ ಅಲ್ ಖೈದಾದೊಂದಿಗೆ ಸಂಪರ್ಕ ಹೊಂದಿದ್ದ ಮೂವರನ್ನು ರಾಜ್‌ಕೋಟ್‌ನಲ್ಲಿ ಬಂಧಿಸಿತ್ತು. ನಿಷೇಧಿತ ಭಯೋತ್ಪಾದಕ ಸಂಘಟನೆಗೆ ಜನರನ್ನು ಪ್ರಚೋದಿಸಲು ಮತ್ತು ನೇಮಕಾತಿ ಮಾಡಲು ಬಾಂಗ್ಲಾದೇಶದ ಹ್ಯಾಂಡ್ಲರ್‌ಗಾಗಿ ಅವರು ಪ್ರಾಥಮಿಕವಾಗಿ ಕೆಲಸ ಮಾಡುತ್ತಿದ್ದರು.