HD Revanna Kidnap Case: ಎಚ್ಡಿ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ, ಜೈಲಿಗೆ ಶಿಫ್ಟ್
ಬೆಂಗಳೂರು ಮೇ 08: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಎನ್ನಲಾಗಿರುವ ಸಂಸತ್ರಸ್ತೆಯನ್ನು ಅಪಹರಣ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ಹೆಚ್ಡಿ ರೇವಣ್ಣ ಅವರಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ. ಎಸ್ಐಟಿ ಕಸ್ಟಡಿ ಅವಧಿ ಇಂದು (ಮೇ 08) ಮುಕ್ತಾಯವಾಗಿದ್ದರಿಂದ ರೇವಣ್ಣ ಅವರನ್ನು ಬೆಂಗಳೂರಿನ 17ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಇದೀಗ ಕೋರ್ಟ್ ಮೇ 14ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ. ಮತ್ತೊಂದೆಡೆ ರೇವಣ್ಣ ಅವರ ಜಾಮೀನು ಅರ್ಜಿ ಸಹ ನಾಳೆಗೆ ಮುಂದೂಡಿದೆ. ಇದರಿಂದ ರೇವಣ್ಣಗೆ ಪರಪ್ಪನ ಅಗ್ರಹಾರ ಜೈಲೇ ಗತಿ.
ವಿಶೇಷ ತನಿಖಾ ವಶದಲ್ಲಿದ್ದ ರೇವಣ್ಣ ಅವರ ಕಸ್ಟಡಿ ಅವಧಿ ಇಂದಿಗೆ (ಮೇ.08) ಮುಕ್ತಾಯವಾಗಿದ್ದು. ಹೀಗಾಗಿ ಎಸ್ಐಟಿ ಅಧಿಕಾರಿಗಳು ರೇವಣ್ಣ ಅವರನ್ನು ಮತ್ತೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಇತ್ತ ಜನಪ್ರತಿನಿಧಿಗಳ ವಿಶೇಷ ಎಚ್ ಡಿ ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಇದರಿಂದ ರೇವಣ್ಣಗೆ ಮತ್ತೆ ಹಿನ್ನಡೆಯಾಗಿದ್ದು, ಪರಪ್ಪನ ಅಗ್ರಹಾರ ಜೈಲಿಗೆ ಹೋಗಬೇಕಿದೆ.
ಏನಿದು ಕಿಡ್ನಾಪ್ ಕೇಸ್?
ವ್ಯಕ್ತಿಯೊಬ್ಬರು ತನ್ನ ತಾಯಿ ನಾಪತ್ತೆಯಾಗಿದ್ದಾರೆ. ಬಿಡುಗಡೆಯಾದ ಅಶ್ಲೀಲ ವಿಡಿಯೊದಲ್ಲಿ ಅವರ ಚಿತ್ರವೂ ಇತ್ತು, ಬಳಿಕ ಅವರು ಕಣ್ಮರೆಯಾಗಿದ್ದಾರೆ ಎಂದು ಮೇ 2ರ ತಡರಾತ್ರಿ ಮೈಸೂರಿನ ಕೆಆರ್ ನಗರ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ಸಂಬಂಧ ರೇವಣ್ಣ ಪತ್ನಿ ಭವಾನಿಯವರ ಸಂಬಂಧಿಯೂ ಆಗಿರುವ ಸತೀಶ್ ಬಾಬು ಎಂಬವರನ್ನು ಈಗಾಗಲೇ ಎಸ್ಐಟಿ ಬಂಧಿಸಿದೆ. ಇವರನ್ನು ಆರೋಪಿ ಸಂಖ್ಯೆ 2 ಎಂದು ಎಸ್ಐಟಿ ಗುರುತಿಸಿದೆ. ರೇವಣ್ಣ ಮೊದಲ ಆರೋಪಿಯಾಗಿದ್ದಾರೆ. ಸಂತ್ರಸ್ತೆಯ 20 ವರ್ಷದ ಪುತ್ರ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿತ್ತು.
ಮಹಿಳೆಯ ಪತ್ತೆಗಾಗಿ ನಂತರ ಮೈಸೂರು, ಹಾಸನ, ಮಂಡ್ಯ ಜಿಲ್ಲೆಗಳು ಮತ್ತು ಬೆಂಗಳೂರು ನಗರ ಸೇರಿದಂತೆ ವಿವಿಧಡೆ ಪರಿಶೀಲನೆ ನಡೆಸಲಾಗಿತ್ತು. ಮಹಿಳೆ ರೇವಣ್ಣ ಅವರ ಆಪ್ತನ ತೋಟದ ಮನೆಯಲ್ಲಿ ಪತ್ತೆಯಾಗಿದ್ದಳು. ಬಳಿಕ ಮೇ 03ರ ಸಂಜೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ರೇವಣ್ಣಗೆ ಎಸ್ಐಟಿ ಮೂರನೇ ನೋಟಿಸ್ ನೀಡಿತ್ತು.
ಹೆಚ್ಡಿ ರೇವಣ್ಣ ಬಂಧನ
ಈ ಮಧ್ಯೆ ಮಾಜಿ ಹೆಚ್ಡಿ ರೇವಣ್ಣ ವಕೀಲರ ಮೊರೆ ಹೋಗಿದ್ದು, ಮಧ್ಯಂತರ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಸಿದ್ದರು. ಶನಿವಾರ (ಮೇ 04) ಸಂಜೆ ರೇವಣ್ಣಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿತು. ಇದೇ ಬೆನ್ನಲ್ಲೇ ಶನಿವಾರ ಸಂಜೆಯೇ ಪದ್ಮನಾಭನಗರದ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ನಿವಾಸದಲ್ಲಿ ಹೆಚ್ಡಿ ರೇವಣ್ಣ ಅವರನ್ನು ಬಂಧಿಸಲಾಗಿತ್ತು.
ಶನಿವಾರ ರಾತ್ರಿ 7.30ರ ಸುಮಾರಿಗೆ ಎಸ್ಐಟಿ ಅಧಿಕಾರಿಗಳು ರೇವಣ್ಣ ಅವರನ್ನು ಸಿಐಡಿ ಕಚೇರಿಗೆ ರೇವಣ್ಣ ಕರೆತಂದರು. ಭಾನುವಾರ ಸಂಜೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಯಿತು. ಅದೇ ದಿನ ರಾತ್ರಿ 7 ಗಂಟೆಗೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ನ್ಯಾಯಾಧೀಶರು ನಾಲ್ಕು ದಿನ ಎಸ್ಐಟಿ ಕಸ್ಟಡಿಗೆ ನೀಡಿದ್ದರು.
ಎಸ್ಐಟಿ ಅಧಿಕಾರಿಗಳು ಸೋಮವಾರದಿಂದ ಮಂಗಳವಾರ ರಾತ್ರಿವರೆಗೂ ರೇವಣ್ಣರನ್ನು ವಿಚಾರಣೆ ನಡೆಸಿದ್ದರು. ಮಂಗಳವಾರ ರಾತ್ರಿ ರೇವಣ್ಣ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಸ್ಐಟಿ ಅಧಿಕಾರಿಗಳು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮತ್ತೆ ಸಿಐಡಿ ಕಚೇರಿಗೆ ಕರೆತಂದಿದ್ದಾರೆ. ಇಂದು (ಮೇ 08) ಮಧ್ಯಾಹ್ನದವರೆಗೂ ರೇವಣ್ಣಅವರನ್ನು ವಿಚಾರಣೆ ನಡೆಸಿ, ಮಧ್ಯಾಹ್ನದ ನಂತರ ಮತ್ತೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.