ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ಲೈಂಗಿಕ ದೌರ್ಜನ್ಯ ಆರೋಪ: ಸಂಸದ ಪ್ರಜ್ವಲ್ ರೇವಣ್ಣ ಜೆಡಿಎಸ್ನಿಂದ ಉಚ್ಚಾಟನೆ
ಬೆಂಗಳೂರು, ಏಪ್ರಿಲ್ 29: ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಈ ಬಗ್ಗೆ ಸ್ವತಃ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ಡಿ ಕುಮಾರಸ್ವಾಮಿ ಖಚಿತಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಇಂದು (ಏಪ್ರಿಲ್ 29) ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಜೆಡಿಎಸ್ ಪಕ್ಷದಿಂದ ಪ್ರಜ್ವಲ್‌ರನ್ನು ಉಚ್ಚಾಟಿಸಲಾಗಿದೆ. ಯಾರು ಎಲ್ಲಿ ಹೋಗುತ್ತಾರೆ ಎಂದು ಕಾಯಲು ಆಗುತ್ತಾ ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ನಾವೇ ಹೇಳುತ್ತಿದ್ದೇವಲ್ಲಾ, ಸಮಗ್ರ ತನಿಖೆ ಆಗಬೇಕೆಂದು. ಬಿಜೆಪಿಗೂ ಇದಕ್ಕೂ ಯಾವುದೇ ರೀತಿ ಸಂಬಂಧ ಇಲ್ಲ. ನನಗೂ ಈ ಘಟನೆಗೂ ಯಾವುದೇ ಸಂಬಂಧ ಇಲ್ಲ. ನನ್ನ, ನನ್ನ ತಂದೆ ಬಗ್ಗೆ ಸಂಶಯ ಪಡಬೇಡಿ ಎಂದು ಸ್ಪಷ್ಟಪಡಿಸಿದರು.
ಕೋರ್ ಕಮಿಟಿ ಸಭೆಗೂ ಮುನ್ನವೇ ಉಚ್ಛಾಟನೆ
ಈ ಬಗ್ಗೆ ರಾತ್ರಿಯೇ ಹೆಚ್.ಡಿ.ದೇವೇಗೌಡರ ಬಳಿ ಚರ್ಚೆ ಮಾಡಿದ್ದೆ. ನಾಳೆ ಹುಬ್ಬಳ್ಳಿಯ ಕೋರ್ ಕಮಿಟಿಯಲ್ಲಿ ನಿರ್ಧಾರ ಆಗಬೇಕಿತ್ತು . ಸಭೆಗೂ ಮುನ್ನ ಪ್ರಜ್ವಲ್ ಅವರನ್ನು ದೇವೇಗೌಡ್ರು ಉಚ್ಚಾಟನೆ ಮಾಡಿದ್ದಾರೆ. ತಪ್ಪು ಮಾಡಿದ್ದರೆ ಈ ನೆಲದ ಕಾನೂನಿನಲ್ಲಿ ಶಿಕ್ಷೆ ಆಗಬೇಕು. ಈ ಪ್ರಕರಣದಲ್ಲಿ ದೇವೇಗೌಡರು, ನನ್ನನ್ನು ಯಾಕೆ ತರುತ್ತೀರಾ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ನಮ್ಮ ವ್ಯವಹಾರ, ಅವರ ವ್ಯವಹಾರ ಬೇರೆ ಬೇರೆ ನಡೆಯುತ್ತದೆ. ರಾಜ್ಯದ ಹೆಣ್ಣು ಮಕ್ಕಳ ಪರವಾಗಿ ನಾನು ಧ್ವನಿ ಎತ್ತುತ್ತೇನೆ. ಸಂಸದ ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಈ ನಿಟ್ಟಿನಲ್ಲಿ ನನ್ನ ಸ್ಟ್ಯಾಂಡ್ ಮುಂದುವರೆದಿದೆ ಎಂದು ಸ್ಪಷ್ಟಪಡಿಸಿದರು.
ಪೆನ್ಡ್ರೈವ್ ಹಂಚಿರುವ ಬಗ್ಗೆಯೂ ತನಿಖೆ ಆಗಲಿ
ಇನ್ನು ಇದೇ ವೇಳೆ ಪೆನ್ಡ್ರೈನಲ್ಲಿನ ವಿಡಿಯೋಗಳನ್ನು ವೈರಲ್ ಮಾಡಿದ್ದವರ ವಿರುದ್ಧ ಗರಂ ಆದ ಕುಮಾರಸ್ವಾಮಿ, ಚುನಾವಣೆ ವೇಳೆ ಪೆನ್ಡ್ರೈವ್ ಹಂಚಿರುವ ಬಗ್ಗೆಯೂ ತನಿಖೆ ಆಗಲಿ. ಲಕ್ಷಾಂತರ ಪೆನ್ ಡ್ರೈವ್ ಹಂಚಿದ್ದು ಯಾರು ಎಂದು ತಿಳಿಯಬೇಕು. ಪೆನ್ ಡ್ರೈವ್ ಹಂಚಿದ್ದು ದೊಡ್ಡ ಅಪರಾಧ. ಈ ಪ್ರಕರಣ ಕೆಲ ವರ್ಷಗಳ ಹಳೆಯದ್ದು ಎಂದು ಹೇಳಲಾಗ್ತಿದೆ. ಇಷ್ಟು ದಿನ ಈ ಪ್ರಕರಣ ಬೆಳಕಿಗೆ ಬಂದಿರಲಿಲ್ಲ. ಚುನಾವಣೆ ಸಮಯದಲ್ಲಿ ಈ ವಿಷಯವನ್ನು ಹೊರಗೆ ಹಾಕಿದ್ದಾರೆ . ಎಸ್ಐಟಿ ತನಿಖೆಯಿಂದ ಪ್ರಕರಣದ ಸತ್ಯ ಹೊರಬರಬೇಕಿದೆ. ಮಹಿಳೆಯರ ಬಗ್ಗೆ ನನಗೆ ತುಂಬಾ ಗೌರವ ಇದೆ. ತಪ್ಪು ಯಾರು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲೇಬೇಕು. ವಿನಾಕಾರಣ ಈ ಪ್ರಕರಣದಲ್ಲಿ ಹೆಚ್ಡಿಡಿ, ಕುಮಾರಸ್ವಾಮಿ, ಮೋದಿ, ಬಿಜೆಪಿಯನ್ನು ತರುವುದು ಸರಿಯಿಲ್ಲ. SIT ತನಿಖೆ ವರದಿ ಬಂದ ಬಳಿಕ ಎಲ್ಲದಕ್ಕೂ ಉತ್ತರ ನೀಡುತ್ತೇನೆ ಎಂದು ಹೇಳಿದರು.
ಮುಜುಗರದಿಂದ ತಪ್ಪಿಸಿಕೊಳ್ಳುವ ಪ್ರಯತ್ನ
ಹಾಸನದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರು ಸೋತರೆ ಅಶ್ಲೀಲ ವಿಡಿಯೋ ಪ್ರಕರಣದ ವಿಚಾರಣೆಯನ್ನು ಎದುರಿಸಬೇಕಾಗುತ್ತೆ. ಒಂದು ವೇಳೆ ಲೋಕಸಭಾ ಚುನಾವಣೆಯಲ್ಲಿ ಗೆದ್ದರೂ ಪ್ರಜ್ವಲ್ ರೇವಣ್ಣ ಅವರ ಸಂಸದ ಸ್ಥಾನಕ್ಕೆ ಕುತ್ತು ಬರಲಿದೆ. ಚುನಾವಣೆಯಲ್ಲಿ ಗೆದ್ದರೆ ಪ್ರಜ್ವಲ್ ರೇವಣ್ಣ ಅವರು ಸಂಸದರಾಗಿ ಮುಂದುವರಿಯುತ್ತಾರೆ. ಆದರೆ ಪ್ರಜ್ವಲ್ ರೇವಣ್ಣ ಅವರ ಮೇಲೆ SIT ತನಿಖೆ ನಡೆಯುತ್ತಿರುವುದರಿಂದ ಜೆಡಿಎಸ್ ಪಕ್ಷವೇ ರಾಜೀನಾಮೆ ನೀಡುವಂತೆ ಸೂಚಿಸುವ ಸಾಧ್ಯತೆ ಇದೆ. ವಿಡಿಯೋ ಪ್ರಕರಣದಲ್ಲಿ ಮೇಲ್ನೋಟಕ್ಕೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದಿಂದ ಉಚ್ಛಾಟನೆ ಮಾಡಿ ಸದ್ಯಕ್ಕೆ ಮುಜುಗರದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದೆ.
ಹಾಸನದಲ್ಲಿ ಗೆದ್ರೆ ಸಂಸದ ಸ್ಥಾನ ಏನಾಗಲಿದೆ?
ಹಾಸನ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಅವರು ಗೆದ್ದರೆ ಸಂಸದ ಸ್ಥಾನದಲ್ಲಿ ಮುಂದುವರಿಯುತ್ತಾರೆ. ಆದರೆ ದೂರು ಕೊಟ್ಟವರು, ತನಿಖಾಧಿಕಾರಿಗಳು ಕೋರ್ಟ್‌ನಲ್ಲಿ ಆರೋಪ ಸಾಬೀತು ಪಡಿಸುವುದು ಬಹಳ ಮುಖ್ಯವಾಗಿದೆ. ಕೋರ್ಟ್‌ನಲ್ಲಿ ಪ್ರಜ್ವಲ್ ರೇವಣ್ಣ ತಪ್ಪಿತಸ್ಥ ಎಂದು ಸಾಬೀತು ಮಾಡಿದರೆ ಪ್ರಜಾಪ್ರತಿನಿಧಿ ಕಾಯ್ದೆಯ ಅಡಿ ಸಂಸದ ಸ್ಥಾನದಿಂದ ವಜಾಗೊಳಿಸುವ ಸಾಧ್ಯತೆ ಇದೆ. ಇನ್ನು ಪ್ರಜ್ವಲ್ ರೇವಣ್ಣ ಅವರು ಹಾಸನ ಲೋಕಸಭಾ ಚುನಾವಣೆಯಲ್ಲಿ ಗೆದ್ದರೂ ಜೆಡಿಎಸ್ ಪಕ್ಷ ತನಿಖೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರೂ ನೀಡಬಹುದು.
ಕೇವಲ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ವಿಡಿಯೋಗಳು ವೈರಲ್ ಆಗಿವೆ. ಆದ್ರೆ, ಇದರ ಮಧ್ಯೆ ಶಾಸಕ ಪ್ರಜ್ವಲ್ ಅವರ ತಂದೆ ಎಚ್ಡಿ ರೇವಣ್ಣ ವಿರುದ್ಧವೂ ಸಹ ಎಫ್ಐಆರ್ ದಾಖಲಾಗಿದೆ. ಸಂತ್ರಸ್ತೆ ಮಹಿಳೆ ನೀಡಿದ ದುರಿನ ಮೇರೆಗೆ ಹೊಳೆನರಸಿಪುರ ಪೊಲೀಸ್ ಠಾಣೆಯಲ್ಲಿ ರೇವಣ್ಣ ಮತ್ತು ಪ್ರಜ್ವಲ್ ವಿರುದ್ಧ ದೂರು ದಾಖಲಾಗಿದ್ದು, ರೇವಣ್ಣ ಎ1 ಆರೋಪಿಯಾಗಿದ್ದರೆ, ಪ್ರಜ್ವಲ್ ಎ2 ಆರೋಪಿಯಾಗಿದ್ದಾರೆ, ಇದೀಗ ಎಲ್ಲರ ಪ್ರಶ್ನೆ ಏನೆಂದರೆ ಎ2 ಆರೋಪಿ ಪ್ರಜ್ವಲ್ ರೇವಣ್ಣ ಅವರನ್ನು ಏನೋ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಆದ್ರೆಮ ಎ1 ಆರೋಪಿಯಾಗಿರುವ ಶಾಸಕ ರೇವಣ್ಣ ವಿರುದ್ಧ ಏನು ಕ್ರಮ ಎಂಬ ಪ್ರಶ್ನೆಗಳು ಉದ್ಭವಿಸಿವೆ.