46 ವರ್ಷಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಅವರು ಪೆರ್ಡೂರು, ಅಮೃತೇಶ್ವರಿ ಮೇಳ, ಹಿರೇಮಹಾಲಿಂಗೇಶ್ವರ ಮೇಳ, ಶಿರಸಿ ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ತಿರುಗಾಟ ನಡೆಸಿದ್ದರು. ಬಡಗು ತಿಟ್ಟಿನ ಜನಪ್ರಿಯ ಮೇಳವಾಗಿರುವ ಪೆರ್ಡೂರು ಮೇಳವೊಂದರಲ್ಲೇ 28 ವರ್ಷಗಳ ಕಾಲ ತಿರುಗಾಟ ನಡೆಸಿದ್ದರು.
1957ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದ ಸುಬ್ರಹ್ಮಣ್ಯ ಧಾರೇಶ್ವರ ಅವರು ಚಿಕ್ಕವರಿದ್ದಾಗಲೇ ಸಂಗೀತ ಕಲಿತು ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಇದೇ ವೇಳೆ ಎಲೆಕ್ಟ್ರಿಕ್ ಅಂಗಡಿ ಪ್ರಾರಂಭಿಸಿ ಯಕ್ಷಗಾನ ಮೇಳಕ್ಕೆ ಲೈಟಿಂಗ್ ವ್ಯವಸ್ಥೆ ಮಾಡುಕೊಟ್ಟಿದ್ದರು. ಇವರ ಪ್ರತಿಭೆ ಮತ್ತು ಸಾಮರ್ಥ್ಯವನ್ನು ನಾರಣಪ್ಪ ಉಪ್ಪೂರರು ಕಂಡು ರಂಗಸ್ಥಳಕ್ಕೆ ಕರೆತಂದರು.