ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ಅರವಿಂದ್ ಕೇಜ್ರಿವಾಲ್‌ರನ್ನು ಸಿಎಂ ಸ್ಥಾನದಿಂದ ವಜಾಗೊಳಿಸುವಂತೆ ಪಿಐಎಲ್; ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್
ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ದೆಹಲಿ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ.
ಕೆಲವೊಮ್ಮೆ ವೈಯಕ್ತಿಕ ಹಿತಾಸಕ್ತಿಯು ರಾಷ್ಟ್ರೀಯ ಹಿತಾಸಕ್ತಿಗೆ ಅಧೀನವಾಗಿರಬೇಕು ಎಂದು ಹೈಕೋರ್ಟ್ ಹೇಳಿದೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪಿಎಸ್ ಅರೋರಾ ಅವರಿದ್ದ ಪೀಠವು, ಕೆಲವು ಸಂದರ್ಭಗಳಲ್ಲಿ ವೈಯಕ್ತಿಕ ಹಿತಾಸಕ್ತಿಗಿಂತ ರಾಷ್ಟ್ರೀಯ ಹಿತಾಸಕ್ತಿಯೇ ಮುಖ್ಯವಾಗಿರಬೇಕು. ನ್ಯಾಯಾಲಯವಾಗಿ ನಾವು ಕಾನೂನಿನ ಚೌಕಟ್ಟಿನೊಳಗೆ ಹೋಗಬೇಕು. ನೀವು ಹೇಳಿದಂತೆ ಪರಿಹಾರ ಒದಗಿಸಲು ಸಾಧ್ಯವಿಲ್ಲ. ಹೀಗಾಗಿ, ನೀವು ಕಾನೂನಿನ ಚೌಕಟ್ಟಿನೊಳಗೆ ಸೂಕ್ತವಾದ ಕಾನೂನು ಪ್ರಾಧಿಕಾರ ಅಥವಾ ವೇದಿಕೆಯ ಮುಂದೆ ಹೋಗಬೇಕು ಎಂದು ನಿರ್ದೇಶಿಸಿದೆ.
ಕೇಜ್ರಿವಾಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಇದೇ ರೀತಿಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇತ್ತೀಚೆಗೆ ವಜಾಗೊಳಿಸಿರುವುದಾಗಿ ಪೀಠವು ಹೇಳಿದೆ ಮತ್ತು ಹೀಗಾಗಿ, ವಿಭಿನ್ನ ದೃಷ್ಟಿಕೋನವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದಿದೆ.
ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ನ್ಯಾಯಾಲಯ ನಿರಾಕರಿಸಿದ್ದರಿಂದ, ಅರ್ಜಿದಾರ ವಿಷ್ಣು ಗುಪ್ತಾ ಅವರ ಪರ ವಕೀಲರು, ಅರ್ಜಿಯನ್ನು ಹಿಂಪಡೆಯಲು ಸೂಚನೆ ನೀಡಲಾಗಿದ್ದು, ಅವರು ತಮ್ಮ ಮನವಿಯೊಂದಿಗೆ ಲೆಫ್ಟಿನೆಂಟ್ ಗವರ್ನರ್ ಅವರನ್ನು ಸಂಪರ್ಕಿಸುವುದಾಗಿ ಹೇಳಿದರು.
ಅರ್ಜಿಯನ್ನು ಹಿಂಪಡೆಯಲು ಅರ್ಜಿದಾರರಿಗೆ ಅವಕಾಶ ನೀಡಿರುವ ನ್ಯಾಯಾಲಯ, ಅರ್ಜಿಯನ್ನು ವಿಲೇವಾರಿ ಮಾಡಿದೆ.