ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ಹಿರಿಯ ಪತ್ರಕರ್ತ ಎಂ.ಕೆ.ಭಾಸ್ಕರ್ ರಾವ್ ನಿಧನ: ಮುಖ್ಯಮಂತ್ರಿ ಕಂಬನಿ
ಬೆಂಗಳೂರು: ಹಿರಿಯ ಪತ್ರಕರ್ತ ಎಂ.ಕೆ.ಭಾಸ್ಕರರಾವ್ ಅವರು ಬೆಂಗಳೂರಿನಲ್ಲಿ ಬುಧವಾರ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಎರಡು ವರ್ಷದಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಕೊನೆಯುಸಿರೆಳೆದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಮೃತರಿಗೆ ಪತ್ನಿ ಜಯಾ, ಪುತ್ರ ಅಭಿಜಿತ್ ಇದ್ದಾರೆ. ಬೆಂಗಳೂರಿನ ಬನ್ನೇರಘಟ್ಟ ರಸ್ತೆಯಲ್ಲಿರುವ ಸೌತ್ ಸಿಟಿ ಅಪಾರ್ಟ್ ಮೆಂಟ್ ಗೆ ಪಾರ್ಥಿವ ಶರೀರವನ್ನು ತರಲಾಗಿದ್ದು, ಅಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮೂಲತಃ ಶಿರಸಿ ತಾಲ್ಲೂಕಿನವರಾದ ಎಂ.ಕೆ.ಭಾಸ್ಕರರಾವ್ ಅವರು ಬೆಳೆದಿದ್ದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ. ಅಲ್ಲಿಯೇ ಶಿಕ್ಷಣ ಮುಗಿಸಿ ನಂತರ ಪತ್ರಿಕೋದ್ಯಮ ಸೇರಿದವರು. ಪ್ರಜಾವಾಣಿ ಪತ್ರಿಕೆಯಲ್ಲಿಯೇ ಮೂರು ದಶಕಕ್ಕೂ ಅಧಿಕ ಕಾಲ ಕೆಲಸ ಮಾಡಿದ್ದರು.
ಸಮಾಜಮುಖಿ ಪತ್ರಕರ್ತರಾಗಿದ್ದ ಭಾಸ್ಕರರಾವ್ ತಮ್ಮ ಹರಿತ ಬರವಣಿಗೆ ಮಾತ್ರವಲ್ಲದೇ ಮಾತಿನಿಂದಲೂ ಗುರುತಿಸಿಕೊಂಡಿದ್ದರು. ಚುನಾವಣೆ ವೇಳೆ ಹಲವಾರು ಚಾನೆಲ್‌ಗಳಲ್ಲಿ ವಿಶ್ಲೇಷಣೆ ಮಾಡುತಿದ್ದರು. ಪ್ರಚಲಿತ ವಿದ್ಯಾಮಾನಗಳ ಕುರಿತು ನಿಖರವಾಗಿ ಮಾತನಾಡುವ ಜ್ಞಾನ ಅವರಲ್ಲಿತ್ತು.
ಮುಖ್ಯಮಂತ್ರಿ ಕಂಬನಿ: ಹಿರಿಯ ಪತ್ರಕರ್ತರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ.