Advertisement ದೇಶ ಭಾರತ ಮಾತೆ ನೋವಿನಲ್ಲಿದ್ದಾರೆ, ಈ ದೌರ್ಜನ್ಯ ಹೆಚ್ಚುದಿನ ನಡೆಯುವುದಿಲ್ಲ: ಕೇಜ್ರಿವಾಲ್ ಸಂದೇಶ ಓದಿದ ಸುನೀತಾ ಕೇಜ್ರಿವಾಲ್
‘ಕಳೆದ 75 ವರ್ಷಗಳಲ್ಲಿ ದೆಹಲಿಯ ಜನರು ಅನ್ಯಾಯವನ್ನು ಎದುರಿಸಿದ್ದಾರೆ. ಇಂಡಿಯಾ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬಂದರೆ ನಾವು ದೆಹಲಿಯನ್ನು ಸಂಪೂರ್ಣ ರಾಜ್ಯವನ್ನಾಗಿ ಮಾಡುತ್ತೇವೆ’ ಎಂದು ಹೇಳಿದರು.
ಎನ್‌ಸಿಪಿ (ಶರದ್‌ಚಂದ್ರ ಪವಾರ್) ನಾಯಕ ಶರದ್ ಪವಾರ್, ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್ ರಾಮಲೀಲಾ ಮೈದಾನದಲ್ಲಿ ಜಮಾಯಿಸಿದ್ದರು.
ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ, ಎಎಪಿ ನಾಯಕ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಕೂಡ ರ್‍ಯಾಲಿಯಲ್ಲಿ ಭಾಗವಹಿಸಿದ್ದಾರೆ.
ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೂಡ ಇಂಡಿಯಾ ಮೈತ್ರಿಕೂಟದ ನಾಯಕರೊಂದಿಗೆ ವೇದಿಕೆ ಹಂಚಿಕೊಂಡರು.
ಪ್ರಧಾನಿ ಮೋದಿಯವರು ತಮ್ಮ ಪತಿಯನ್ನು ಕಂಬಿ ಹಿಂದೆ ಹಾಕಿದ್ದಾರೆ. ಪ್ರಧಾನಿಯವರ ಈ ನಡೆಯು ಸಮರ್ಥನೀಯವೇ?. ಅರವಿಂದ್ ಕೇಜ್ರಿವಾಲ್ ನಿಜವಾದ ದೇಶಭಕ್ತ ಮತ್ತು ಪ್ರಾಮಾಣಿಕ ವ್ಯಕ್ತಿ ಎಂದು ನೀವೆಲ್ಲರೂ ನಂಬುತ್ತೀರಾ ಎಂದು ಪ್ರಶ್ನಿಸಿದರು. ಜೈಲಿನಲ್ಲಿರುವ ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎನ್ನುವ ಬಿಜೆಪಿ ನಾಯಕರ ಟೀಕೆಗಳನ್ನು ಉಲ್ಲೇಖಿಸಿ, ತಮ್ಮ ಪತಿ ಇದೆಲ್ಲದರಿಂದ ಹೊರಬರುತ್ತಾರೆ ಮತ್ತು ಬಲವಾದ ಇಚ್ಛಾಶಕ್ತಿಯುಳ್ಳವರು ಎಂದು ಹೇಳಿದರು.
‘ನಿಮ್ಮ ಕೇಜ್ರಿವಾಲ್ ಸಿಂಹ’ ಎಂದು ಅವರು ಘೋಷಿಸಿದರು, ಅವರನ್ನು ಹೆಚ್ಚು ಕಾಲ ಬಂಧಿಸಲಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.