ಚೆನ್ನೈ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದ್ದ ಎಂಡಿಎಂಕೆ ಪಕ್ಷದ ಹಿರಿಯ ನಾಯಕ ಈರೋಡ್ ಸಂಸದ ಗಣೇಶ ಮೂರ್ತಿ ಸಾವನ್ನಪ್ಪಿದ್ದಾರೆ.
ಕೊಯಮತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಣೇಶ ಮೂರ್ತಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಗಣೇಶ್ ಮೂರ್ತಿ ಅವರು ಎಂಡಿಎಂಕೆ ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದು, 2019ರ ಲೋಕಸಭೆ ಚುನಾವಣೆಯಲ್ಲಿ ಈರೋಡ್ ಕ್ಷೇತ್ರದಿಂದ ಡಿಎಂಕೆ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಂಸದರಾಗಿದ್ದರು. ಈ ಬಾರಿಯೂ ಸಹ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವಿನ ನಿರೀಕ್ಷೆಯಲ್ಲಿದ್ದರು.
ಗಣೇಶ್ ಮೂರ್ತಿ ಅವರಿಗೆ 77 ವರ್ಷ ವಯಸ್ಸಾಗಿತ್ತು. ಪೊಲೀಸರ ಪ್ರಕಾರ, ಎಂಡಿಎಂಕೆ ಪಕ್ಷದ ಗಣೇಶಮೂರ್ತಿ ಅವರು ಮಾರ್ಚ್ 24ರಂದು ತಮ್ಮ ನಿವಾಸದಲ್ಲಿ ವಿಷಯುಕ್ತ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಈ ಸಂಬಂಧ ಈರೋಡ್ ಟೌನ್ ಪೊಲೀಸರು ಆತ್ಮಹತ್ಯೆ ಯತ್ನ ಪ್ರಕರಣ ದಾಖಲಿಸಿದ್ದರು.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಇನ್‌ಸ್ಟಿಟ್ಯೂಟ್ ಆಫ್ ರೋಡ್ ಟ್ರಾನ್ಸ್‌ಪೋರ್ಟ್ (ಐಆರ್‌ಟಿ) ವೈದ್ಯಕೀಯ ಕಾಲೇಜಿಗೆ ಸಾಗಿಸಲಾಗಿದೆ. ಬಳಿಕ ಕುಮಾರವಲಸು ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಣೇಶ್ ಮೂರ್ತಿ 2024ರ ಸಂಸತ್ ಚುನಾವಣೆಯಲ್ಲಿ ತಮಗೆ ಮತ್ತೊಮ್ಮೆ ಸ್ಪರ್ಧಿಸಲು ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಈ ಬಾರಿ ಎಂಡಿಎಂಕೆ ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳದೇ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಿದೆ. ಹೀಗಾಗಿ ಟಿಕೆಟ್ ಸಿಗದ ಕಾರಣ ಮನನೊಂದು ಗಣೇಶ್ ಮೂರ್ತಿ ಮಾರ್ಚ್ 24ರಂದು ಮಾತ್ರ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿತ್ತು.
ಗಣೇಶ್ ಮೂರ್ತಿ ಅವರ ಸ್ಥಿತಿ ಅರಿತ ಕುಟುಂಬಸ್ಥರು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರು. ಕೊಯಮತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಇಂದು ಬೆಳಗ್ಗೆ ಹೃದಯಾಘಾತವಾಗಿ ಗಣೇಶ ಮೂರ್ತಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ವರದಿಯಾಗಿದೆ.