Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ದೆಹಲಿ ಜಲ ಮಂಡಳಿ ಪ್ರಕರಣ: ‘ನಕಲಿ’ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್‌ಗೆ ಇ.ಡಿ ಹೊಸ ಸಮನ್ಸ್; ಸಚಿವೆ ಅತಿಶಿ

ನವದೆಹಲಿ: ದೆಹಲಿ ಜಲ ಮಂಡಳಿಗೆ ಸಂಬಂಧಿಸಿದ ‘ನಕಲಿ’ ಪ್ರಕರಣದಲ್ಲಿ ತನಿಖೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು (ಇ.ಡಿ) ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಹೊಸ ಸಮನ್ಸ್ ಕಳುಹಿಸಿದೆ ಎಂದು ಎಎಪಿ ಹಿರಿಯ ನಾಯಕಿ ಮತ್ತು ದೆಹಲಿ ಸಚಿವೆ ಅತಿಶಿ ಭಾನುವಾರ ಹೇಳಿದ್ದಾರೆ.

‘ಈ ಡಿಜೆಬಿ (ದೆಹಲಿ ಜಲ ಮಂಡಳಿ) ಪ್ರಕರಣದ ಬಗ್ಗೆ ಯಾರಿಗೂ ತಿಳಿದಿಲ್ಲ. ಕೇಜ್ರಿವಾಲ್ ಅವರನ್ನು ಹೇಗಾದರೂ ಮಾಡಿ ಬಂಧಿಸಲು ಮತ್ತು ಲೋಕಸಭೆ ಚುನಾವಣೆಗೆ ಪ್ರಚಾರ ಮಾಡದಂತೆ ತಡೆಯಲು ಇದು ಬ್ಯಾಕಪ್ ಯೋಜನೆಯಾಗಿದೆ’ ಎಂದು ಅವರು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಶನಿವಾರ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾದ ಕೆಲವೇ ಗಂಟೆಗಳ ನಂತರ ಮುಂದಿನ ವಾರ ತನಿಖಾ ಸಂಸ್ಥೆಯ ಮುಂದೆ ವಿಚಾರಣೆಗೆ ಹಾಜರಾಗುವಂತೆ ಕೇಜ್ರಿವಾಲ್ ಅವರಿಗೆ ಎರಡು ಸಮನ್ಸ್‌ಗಳನ್ನು ನೀಡಲಾಗಿದೆ. ಅವುಗಳಲ್ಲಿ ಒಂದು ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದೆ ಮತ್ತು ಇನ್ನೊಂದು ಡಿಜೆಬಿಗೆ ಸಂಬಂಧಿಸಿದೆ ಎಂದು ಅತಿಶಿ ಹೇಳಿದರು.

ರಾಜಕೀಯ ಎದುರಾಳಿಗಳನ್ನು ಮುಗಿಸಲು ಬಿಜೆಪಿಯು ಇ.ಡಿ ಮತ್ತು ಸಿಬಿಐ ಅನ್ನು ತನ್ನ ‘ಗೂಂಡಾ’ಗಳಾಗಿ ಬಳಸಿಕೊಳ್ಳುತ್ತಿದೆ ಎಂದು ಎಎಪಿ ನಾಯಕಿ ಆರೋಪಿಸಿದ್ದಾರೆ.

ಈ ಬಗ್ಗೆ ಇ.ಡಿ ಮತ್ತು ಸಿಬಿಐ ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಡಿಜೆಬಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮಾರ್ಚ್ 18 ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇ.ಡಿ) ಮುಖ್ಯಮಂತ್ರಿ ಕೇಜ್ರಿವಾಲ್ ಅವರಿಗೆ ಸಮನ್ಸ್ ನೀಡಿದೆ.

ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್ ವಿರುದ್ಧ ಹಣ ಅಕ್ರಮ ವರ್ಗಾವಣೆ ತಡೆ ಪ್ರಕರಣದಲ್ಲಿ ದಾಖಲಾಗಿರುವ ಎರಡನೇ ಪ್ರಕರಣ ಇದಾಗಿದೆ.

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿತ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿಯೂ ವಿಚಾರಣೆಗೆ ಹಾಜರಾಗುವಂತೆ ಕೇಜ್ರಿವಾಲ್ ಅವರಿಗೆ ಸಮನ್ಸ್ ನೀಡಲಾಗಿದೆ. ಕೇಜ್ರಿವಾಲ್ ಈವರೆಗೆ ಪ್ರಕರಣದಲ್ಲಿ ಎಂಟು ಸಮನ್ಸ್ ಸ್ವೀಕರಿಸಿದ್ದು, ವಿಚಾರಣೆಗೆ ಗೈರಾಗಿದ್ದಾರೆ ಮತ್ತು ಅವುಗಳನ್ನು ಕಾನೂನುಬಾಹಿರ ಎಂದು ಕರೆದಿದ್ದಾರೆ.

ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದ ಕೇಜ್ರಿವಾಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಇ.ಡಿ ಸಲ್ಲಿಸಿದ ಎರಡು ದೂರುಗಳ ಮೇಲೆ ದೆಹಲಿ ನ್ಯಾಯಾಲಯ ಶನಿವಾರ ಕೇಜ್ರಿವಾಲ್ ಅವರಿಗೆ ಜಾಮೀನು ಮಂಜೂರು ಮಾಡಿದೆ.

No Comments

Leave A Comment