ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ಬಿಎಸ್ವೈ ವಿರುದ್ಧ ಪೋಕ್ಸೋ ಪ್ರಕರಣ: ಇದು ಅತ್ಯಂತ ಸೂಕ್ಷ್ಮ ವಿಷಯವೆಂದ ಪರಮೇಶ್ವರ್
ಬೆಂಗಳೂರು:ಮಾ 15: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಅವರು ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಇದೊಂದು ಸೂಕ್ಷ್ಮ ವಿಷಯವಾಗಿರುವುದರಿಂದ ಗೃಹ ಸಚಿವರೇ ಮಾತಾಡುತ್ತಾರೆ ಎಂದಿದ್ದಾರೆ.
ನಂತರ ಮಾತನಾಡಿದ ಪರಮೇಶ್ವರ್, ” ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಮಹಿಳೆಯೊಬ್ಬರು ತಮ್ಮ ಮಗಳಿಗೆ ಕಿರುಕುಳ ನೀಡಿದ್ದಾರೆ ಎಂದು ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹೀಗಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದು ಈ ಬಗ್ಗೆ ತನಿಖೆ ಮುಂದುವರೆದಿದೆ. ಇದು ಮಾಜಿ ಮುಖ್ಯಮಂತ್ರಿ ಅವರ ವಿಚಾರವಾಗಿರುವುದರಿಂದ ಇದು ಅತ್ಯಂತ ಸೂಕ್ಷ್ಮ ವಿಷಯವಾಗಿದೆ. ವರದಿ ಏನು ಹೇಳುತ್ತದೆ ಎಂದು ನೋಡೋಣ” ಎಂದು ಹೇಳಿದ್ದಾರೆ.
ಇದೇ ವೇಳೆ ಪ್ರಕರಣದಲ್ಲಿ ಯಾವುದೇ ರಾಜಕೀಯ ಕೋನವನ್ನು ತಳ್ಳಿಹಾಕಿದ ಸಚಿವರು, “ಇದರಲ್ಲಿ ರಾಜಕೀಯ ಕೋನವಿದೆ ಎಂದು ನಾನು ಭಾವಿಸುವುದಿಲ್ಲ, ಮಹಿಳೆ ಯಾರೆಂದು ತಿಳಿದಿಲ್ಲ, ಅವರೇ ನೇರವಾಗಿ ಪೊಲೀಸರಿಗೆ ಹೋಗಿ ದೂರು ನೀಡಿದ್ದಾರೆ, ಪೊಲೀಸರು ನಿರಾಕರಿಸದೇ ಪ್ರಕರಣ ದಾಖಲಿಸಿದ್ದಾರೆ” ಎಂದು ಹೇಳಿದ್ದಾರೆ.
ಯಡಿಯೂರಪ್ಪ ಅವರ ಕಚೇರಿಯು ಈ ಆರೋಪಗಳನ್ನು ನಿರಾಧಾರ ಎಂದು ತಳ್ಳಿಹಾಕಿದ್ದು, ತಾಯಿ ಮತ್ತು ಮಗಳು ಈ ಹಿಂದೆ 50 ಕ್ಕೂ ಹೆಚ್ಚು ದೂರುಗಳನ್ನು ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಯಡಿಯೂರಪ್ಪ ಅವರ ಕಚೇರಿಯೂ ಈ ಹಿಂದೆ ಸಲ್ಲಿಸಲಾದ 53 ವಿವಿಧ ದೂರುಗಳನ್ನು ಬಿಡುಗಡೆ ಮಾಡಿದೆ.