Log In
BREAKING NEWS >
Nandini Milk: ಕೆಎಂಎಫ್ ನಂದಿನಿ ಮಿಲ್ಕ್ ಹೊಸ ದಾಖಲೆ​​: ಒಂದೇ ದಿನ 51 ಲಕ್ಷ ಲೀಟರ್ ಹಾಲು ಮಾರಾಟ....

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಶಂಕಿತನ ಬೆನ್ನು ಹತ್ತಿದ NIA ಅಧಿಕಾರಿಗಳು, ಮತ್ತಷ್ಟು ಫೋಟೋಗಳು ಬಿಡುಗಡೆ!

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಶಂಕಿತನ ಬೆನ್ನಿಗೆ ಬಿದ್ದಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು, ಬಾಂಬರ್’ನ ಮತ್ತಷ್ಟು ಫೋಟೋಗಳನ್ನು ಶನಿವಾರ ಬಿಡುಗಡೆ ಮಾಡಿದ್ದಾರೆ.

ಮಾರ್ಚ್ 3ರಂದು ಪ್ರಕರಣದ ತನಿಖೆ ವಹಿಸಿಕೊಂಡಿರುವ ಎನ್‌ಐಎ, ಶಂಕಿತ ಓಡಾಡಿರುವ ಕೆಲವು ಭಾಗಗಳ ಸಿಸಿಟಿವಿ ಕ್ಯಾಮೆರಾ ವಿಡಿಯೋಗಳನ್ನು ಬಿಡುಗಡೆ ಮಾಡಿತ್ತು. ಈಗ ಅವುಗಳಲ್ಲಿ ಬಹುತೇಕ ಸ್ಪಷ್ಟವಾಗಿ ಗೋಚರಿಸುವ ಶಂಕಿತನ ಕೆಲವು ಚಿತ್ರಗಳನ್ನು ಬಿಡುಗಡೆ ಮಾಡಿದೆ.

ಮಾರ್ಚ್ 1ರಂದು ರಾಮೇಶ್ವರಂ ಕೆಫೆಯಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಇರಿಸಿದ್ದವನು ಎಂದು ನಂಬಲಾದ ಶಂಕಿತನನ್ನು ಪತ್ತೆ ಮಾಡಲು ಸಹಾಯ ಮಾಡುವಂತೆ ಸಾರ್ವಜನಿಕರನ್ನು ಎನ್‌ಐಎ ಕೋರಿದೆ.

ಕೆಫೆಯಲ್ಲಿ ಸ್ಫೋಟ ಸಂಭವಿಸಿದ ಅಂದಾಜು ಒಂದು ಗಂಟೆ ಬಳಿಕ ಪ್ರಮುಖ ಶಂಕಿತ ಉಗ್ರ ಬಿಎಂಟಿಸಿ ಬಸ್ ಒಂದನ್ನು ಹತ್ತುವುದು ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿತ್ತು. ಸ್ಫೋಟವು ಮಾರ್ಚ್ 1ರಂದು ಮಧ್ಯಾಹ್ನ 12.56ಕ್ಕೆ ಸಂಭವಿಸಿದ್ದರೆ, ಅದೇ ದಿನ ಮಧ್ಯಾಹ್ನ 2.03ಕ್ಕೆ ಆತ ಬಿಎಂಟಿಸಿ ಬಸ್ ಹತ್ತುವುದು ಕಾಣಿಸಿದೆ. ಟಿ- ಶರ್ಟ್, ಟೊಪ್ಪಿ, ಮುಖಕ್ಕೆ ಮಾಸ್ಕ್ ಧರಿಸಿದ್ದ ಶಂಕಿತ, ಕೆಫೆಯಲ್ಲಿ ಐಇಡಿ ತುಂಬಿಸಿದ್ದ ಬ್ಯಾಗ್ ಇರಿಸಿ ಹೋಗುವುದು ಸಹ ಮತ್ತೊಂದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಅದೇ ದಿನ ರಾತ್ರಿ 9 ಗಂಟೆಗೆ ಬಸ್ ನಿಲ್ದಾಣವೊಂದರ ಒಳಗೆ ಶಂಕಿತ ಅಡ್ಡಾಡುವುದು ಇನ್ನೊಂದು ವಿಡಿಯೋದಲ್ಲಿ ದಾಖಲಾಗಿದೆ. ಈ ವೇಳೆ ಮಾಸ್ಕ್ ತೆಗೆದಿರುವ ಶಂಕಿತನನ್ನು ಸಹ ಪ್ರಯಾಣಿಕರು ಅಥವಾ ಇತರರು ಕಂಡಿರುವ ಸಾಧ್ಯತೆ ಇದೆ. ಆತನ ಗುರುತು ಪತ್ತೆ ಮಾಡಲು ಮತ್ತು ಬಂಧನಕ್ಕೆ ಸಹಾಯವಾಗುವ ಮಾಹಿತಿ ನೀಡುವವರಿಗೆ 10 ಲಕ್ಷ ರೂ ಬಹುಮಾನ ನೀಡುವುದಾಗಿ ಎನ್‌ಐಎ ಘೋಷಿಸಿದೆ. ಮಾಹಿತಿ ಕೊಟ್ಟವರ ವಿವರ ಗೋಪ್ಯವಾಗಿ ಇರಿಸುವುದಾಗಿ ಸಹ ತಿಳಿಸಿದೆ.

ಬೆಂಗಳೂರು ಪೊಲೀಸರ ಕೇಂದ್ರ ಅಪರಾಧ ದಳವು ತನಿಖೆಯಲ್ಲಿ ಎನ್‌ಐಎ ಜತೆ ಕೈ ಜೋಡಿಸಿದೆ. ಘಟನೆಗೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲೆಯ ಕೌಲ್ ಬಜಾರ್‌ನಲ್ಲಿನ ಬಟ್ಟೆ ವ್ಯಾಪಾರಿ ಹಾಗೂ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ನಂಟು ಹೊಂದಿರುವ ವ್ಯಕ್ತಿಯೊಬ್ಬನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ಶಂಕಿತ ಆರೋಪಿಯು ಘಟನೆ ಬಳಿಕ ತನ್ನ ಉಡುಪು ಬದಲಿಸಿಕೊಂಡಿದ್ದು, ವಿಭಿನ್ನ ಸ್ಥಳಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿದ್ದಾನೆ. ತುಮಕೂರು, ಬಳ್ಳಾರಿ, ಬೀದರ್ ಮತ್ತು ಭಟ್ಕಳ ಸೇರಿದಂತೆ ಆತ ಹೋಗಿದ್ದು, ಬಂಧನದಿಂದ ತಪ್ಪಿಸಿಕೊಳ್ಳಲು ಪದೇ ಪದೇ ಸ್ಥಳ ಬದಲಾವಣೆ ಮಾಡಿದ್ದಾನೆ.

ಕಲಬುರಗಿಯಲ್ಲಿ ಶೋಧ

ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ದಳ ತಂಡ ಕಲಬುರಗಿಗೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

10 ಮಂದಿಯ ಎನ್ಐಎ ತಂಡ ನಿನ್ನೆ ಕಲಬುರಗಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕಲಬುರಗಿ ಬಸ್ ನಿಲ್ದಾಣದ ಹೊರಗೆ ಇಬ್ಬರು ವ್ಯಕ್ತಿಗಳೊಂದಿಗೆ ಮಾತನಾಡಿದ್ದು, ಈ ಇಬ್ಬರೂ ವ್ಯಕ್ತಿಗಳು ಕಲಬುರಗಿ ಡಿಪೋ ಸಂಖ್ಯೆ 1 ರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಕೆಕೆಆರ್‌ಟಿಸಿ) ಬಸ್ ಸಂಖ್ಯೆ ಕೆಎ 32 ಎಫ್ 1885ನಲ್ಲಿ ಸಂಚರಿಸಿದ್ದರು. ಈ ಬಸ್ ನಲ್ಲಿ ಎನ್ಐಎ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ತಿಳಿದುಬಂದಿದೆ.

ಈ ಬಸ್‌ನಲ್ಲಿ ಎರಡು ಕಾಯ್ದಿರಿಸದ ಆಸನಗಳಿದ್ದು, ಈ ಸೀಟ್ ಗಳಲ್ಲಿ ಶಂಕಿತನೊಂದಿಗೆ ಮಾತನಾಡಿದ್ದ ಇಬ್ಬರು ವ್ಯಕ್ತಿಗಳು ಕುಳಿತಿದ್ದರು. ಇಬ್ಬರ ಪೈಕಿ ಓರ್ವ ರಾಮಮಂದಿರ ವೃತ್ತದಲ್ಲಿ ಹಾಗೂ ಮತ್ತೊಬ್ಬ ಕಲಬುರಗಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಮಾರ್ಚ್ 1 ರ ತಡರಾತ್ರಿ ಇಳಿದಿದ್ದರು ಎಂದು ತಿಳಿದುಬಂದಿದೆ.

ಈ ನಡುವೆ ಎನ್ಐಎ ಮತ್ತೊಂದು ತಂಡ ಕಲಬುರಗಿ ರೈಲು ನಿಲ್ದಾಣದಿಂದ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದೆ. ಶನಿವಾರ ರೈಲು ನಿಲ್ದಾಣದ ಬಳಿ ಇರುವ ರೈಲ್ವೆ ರಕ್ಷಣಾ ಪಡೆಯ ಇನ್‌ಸ್ಪೆಕ್ಟರ್ ಕಚೇರಿಯಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ದೃಶ್ಯಗಳನ್ನು ಪರಿಶೀಲಿಸಿದೆ ಎಂದು ಮೂಲಗಳು ತಿಳಿಸಿವೆ.

ಹುಮ್ನಾಬಾದ್ ಬಸ್ ನಿಲ್ದಾಣದಿಂದ ಎನ್‌ಐಎ ತಂಡ ಕಳೆದ 8 ದಿನಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದೆ ಇದು ಬಳ್ಳಾರಿ ಮತ್ತು ಕಲಬುರಗಿಯಲ್ಲಿ ಮೂರು ಕೆಕೆಆರ್‌ಟಿಸಿ ಅಧಿಕಾರ ವ್ಯಾಪ್ತಿಗೆ ಒಳಪಡುತ್ತವೆ. ಸಿಸಿಟಿವಿ ದೃಶ್ಯಾವಳಿಗಳಷ್ಟೇ ಅಲ್ಲದೆ, ಬೆಂಗಳೂರಿನಿಂದ ಕಲಬುರಗಿಗೆ ಹಾಗೂ ಬಳ್ಳಾರಿಯಿಂದ ಕಲಬುರಗಿ ಮತ್ತು ಹುಮನಾಬಾದ್‌ಗೆ ಟಿಕೆಟ್ ಬುಕಿಂಗ್ ಕೌಂಟರ್‌ಗಳಿಂದಲೂ ವಿವರಗಳನ್ನು ಸಂಗ್ರಹಿಸಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

No Comments

Leave A Comment