ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಬಟ್ಟೆ ಬದಲಿಸಿ ಬಸ್ ಹತ್ತಿದ ಬಾಂಬರ್, ತುಮಕೂರು ಮೂಲಕ ಬಳ್ಳಾರಿಗೆ ಪ್ರಯಾಣ
ಬೆಂಗಳೂರು: ಬೆಂಗಳೂರಿನ ಜನಪ್ರಿಯ ಉಪಾಹಾರ ಕೇಂದ್ರ ‘ದಿ ರಾಮೇಶ್ವರಂ ಕೆಫೆ’ಯಲ್ಲಿ ಕಳೆದ ವಾರ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದ್ದು, ಶಂಕಿತ ಆರೋಪಿ ಘಟನೆಯ ನಂತರ ಬಟ್ಟೆ ಬದಲಿಸಿ ಬಸ್‌ನಲ್ಲಿ ಪ್ರಯಾಣಿಸಿದ್ದಾನೆ ಎಂದು ಗೃಹ ಸಚಿವ ಜಿ ಪರಮೇಶ್ವರ ಅವರು ಗುರುವಾರ ತಿಳಿಸಿದ್ದಾರೆ.
ಸ್ಫೋಟದ ನಂತರ ಶಂಕಿತ ವ್ಯಕ್ತಿಯು ಹೂಡಿಯ ಬಳಿ ಬಟ್ಟೆ ಬದಲಿಸಿ ಟೋಪಿ ಬಿಟ್ಟು ಹೋಗಿರುವುದು ಗೊತ್ತಾಗಿದೆ. ಸಿಸಿಬಿ ಹಾಗೂ ಎನ್ಐಎ ಪೊಲೀಸರ ತಂಡಕ್ಕೆ ಆತ ಅಲ್ಲೇ ಟೋಪಿ ಬಿಟ್ಟು ಬಟ್ಟೆ ಬದಲಾಯಿಸಿ ಹೋಗಿರುವುದು ಗೊತ್ತಾಗಿದೆ. ಆರೋಪಿ ಬಸ್‌ನಲ್ಲಿ ತುಮಕೂರು ಕಡೆಗೆ ಪ್ರಯಾಣಿಸಿದ್ದಾನೆ ಎಂದು ಹೇಳಲಾಗಿದ್ದು, ಅಧಿಕಾರಿಗಳು ಲೀಡ್‌ಗಳನ್ನು ಅನುಸರಿಸಿ ಬಳ್ಳಾರಿವರೆಗೆ ಆತನ ಚಲನವಲನವನ್ನು ಪರಿಶೀಲಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಮಾರ್ಚ್ 1 ರಂದು ಸಂಭವಿಸಿದ ಐಇಡಿ ಸ್ಫೋಟ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ನಡೆಸುತ್ತಿದ್ದು, ಬೆಂಗಳೂರು ಪೊಲೀಸ್ ಕೇಂದ್ರ ಅಪರಾಧ ವಿಭಾಗ ಎನ್ಐಎಗೆ ಸಹಾಯ ಮಾಡುತ್ತಿದೆ.
“ಶಂಕಿತ ಯಾವ ದಿಕ್ಕಿನಲ್ಲಿ ಹೋಗಿದ್ದಾರೆ ಮತ್ತು ಎಲ್ಲಿ ಬಟ್ಟೆ ಬದಲಾಯಿಸಿದ್ದಾರೆ ಎಂಬ ಬಗ್ಗೆ ನಮಗೆ ಮಹತ್ವದ ಮಾಹಿತಿ ಸಿಕ್ಕಿವೆ. ಕೆಲವು ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ. ಕಳೆದೆರಡು ದಿನಗಳಲ್ಲಿ ನಮಗೆ ಉತ್ತಮ ಲೀಡ್ ಸಿಕ್ಕಿದೆ. ಆದಷ್ಟು ಬೇಗ ಆರೋಪಿಯನ್ನು ಬಂಧಿಸಲಾಗುವುದು ಎಂದು ಪರಮೇಶ್ವರ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಶಂಕಿತ ಆರೋಪಿ ಬಸ್‌ನಲ್ಲಿ ಪ್ರಯಾಣಿಸಿದ್ದಾನೆ ಎಂದು ತಿಳಿದುಬಂದಿದೆ. ಆ ಲೀಡ್‌ಗಳ ಆಧಾರದ ಮೇಲೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಶಂಕಿತ ವ್ಯಕ್ತಿಯು ಬಸ್‌ನಲ್ಲಿ ತುಮಕೂರು ಕಡೆಗೆ ಪ್ರಯಾಣಿಸಿದ ಬಗ್ಗೆ ಸುಳಿವುಗಳಿವೆ. “ಅಧಿಕಾರಿಗಳು ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಶಂಕಿತ ತುಮಕೂರಿನಿಂದ ಬಳ್ಳಾರಿಗೆ ತೆರಳಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ” ಎಂದು ಅವರು ಹೇಳಿದ್ದಾರೆ.