ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ರಾಜ್ಯಸಭಾ ಚುನಾವಣೆಯ ಮತದಾನ ಅಂತ್ಯ: ಬಿಜೆಪಿಗೆ ಕೈಕೊಟ್ಟ ಮತ್ತೋರ್ವ ಶಾಸಕ, ಕಾಂಗ್ರೆಸ್ ಪ್ಲ್ಯಾನ್ ಸಕ್ಸಸ್
ಬೆಂಗಳೂರು, (ಫೆಬ್ರವರಿ 27): ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ (Karnataka rajyasabha Election) ನಾಲ್ಕು ಸ್ಥಾನಗಳಿಗೆ ನಡೆದ ಮತದಾನದ ಸಮಯ ಮುಕ್ತಾಯವಾಗಿದೆ. ಇಂದು (ಫೆಬ್ರವರಿ 27) ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ನಡೆದಿದ್ದ ಮತದಾನ ಇದೀಗ ಅಂತ್ಯವಾಗಿದ್ದು, ಒಟ್ಟು 223 ಮತಗಳ ಪೈಕಿ 222 ಶಾಸಕಕರು ತಮ್ಮ ಮತದಾನ ಮಾಡಿದ್ದಾರೆ. ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ (BJP MLA Shivaram Hebbar) ಮತದಾನಕ್ಕೆ ಗೈರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶೇ.99.5ರಷ್ಟು ಮತದಾನವಾಗಿದೆ. ಕಾಂಗ್ರೆಸ್ ಪಕ್ಷದ 135 ಶಾಸಕರು, ಮೂವರು ಪಕ್ಷೇತರ ಶಾಸಕರು, ಬಿಜೆಪಿಯ 65 ಶಾಸಕರು, ಜೆಡಿಎಸ್‌ನ 19 ಶಾಸಕ ಸಹ ಮತದಾನ ಮಾಡಿದ್ದಾರೆ. ಯಶವಂತಪುರ ಬಿಜೆಪಿ ಎಸ್ಟಿ ಸೋಮಶೇಖರ್ ಸ್ವಪಕ್ಷದ ಅಭ್ಯರ್ಥಿ ಬದಲಿಗೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಇನ್ನು ಮತ್ತೋರ್ವ ಶಾಸಕ ಶಿವರಾಮ್ ಹೆಬ್ಬಾರ್ ಮತದಾನಕ್ಕೆ ಗೈರಾಗಿದ್ದಾರೆ. ಈ ಮೂಲಕ ಇಬ್ಬರು ಬಿಜೆಪಿ ಶಾಕ್ ಕೊಟ್ಟಿದ್ದಾರೆ.
ಈ ಮತದಾನವಾಗಿರುವ ಪ್ರಕ್ರಿಯೆ ಗಮನಿಸಿದರೆ ಬಿಜೆಪಿ ಅಭ್ಯರ್ಥಿ ಭಂಡಗೆ, ಕಾಂಗ್ರೆಸ್ನ ಮೂವರು ಅಜಯ್ ಮಕೇನ್, ನಾಸೀರ್ ಹುಸೇನ್ ಹಾಗೂ ಚಂದ್ರಶೇಖರ್ ಗೆಲ್ಲುವುದು ಬಹುತೇಕ ಖಚತವಾಗಿದೆ. ಇನ್ನು ಐದನೇ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎನ್ಡಿಎ ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಸೋಲುವುದು ಪಕ್ಕಾ ಆಗಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಫಲಿತಾಂಶ ಪ್ರಕಟವಾಗಲಿದ್ದು, ಯಾರಿಗೆ ಎಷ್ಟು ಮತಗಳು ಬಿದ್ದಿವೆ ಎನ್ನುವುದು ತಿಳಿಯಲಿದೆ.
ಬಿಜೆಪಿಗೆ ಕೈಕೊಟ್ಟ ಸೋಮಶೇಖರ್, ಹೆಬ್ಬಾರ್
ಹೌದು.. ನಿರೀಕ್ಷೆಯಂತೆ ಯಶವಂತಪುರ ಶಾಸಕ ತಮ್ಮ ಬಿಜೆಪಿ ಅಭ್ಯರ್ಥಿಗೆ ಮತಹಾಕುವ ಬದಲಿಗೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ ಶಾಕ್ ಕೊಟ್ಟಿದ್ದಾರೆ. ಮತ್ತೋರ್ವ ಶಾಸಕ ಶಿವರಾಮ್ ಹೆಬ್ಬಾರ್, ಮತದಾನ ಮಾಡದೇ ಬಿಜೆಪಿ ಆಘಾತ ನೀಡಿದ್ದಾರೆ. ಈ ಇಬ್ಬರು ಶಾಸಕರು ಹಲವು ದಿನಗಳಿಂದ ಕಾಂಗ್ರೆಸ್ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಅಲ್ಲದೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಇಬ್ಬರು ಶಾಸಕರು ತಮ್ಮ ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಅಲ್ಲದೇ ರಾಜ್ಯಸಭಾ ಚುನಾವಣೆಯಲ್ಲೂ ಪಕ್ಷಕ್ಕೆ ಮರ್ಮಾಘಾತ ನೀಡಿದ್ದಾರೆ.
ಶಿವರಾಮ್ ಹೆಬ್ಬಾರ್ ಯಾರ ಸಂಪರ್ಕಕ್ಕೂ ಸಿಗದೇ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಅಜ್ಞಾತ ಸ್ಥಳದಲ್ಲಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ರವಿ ಕುಮಾರ್ ಅವರು ಮಾಧ್ಯಮಗಳ ಮೂಲಕ ಬಂದು ಮತದಾನ ಮಾಡುವಂತೆ ಹೆಬ್ಬಾರ್ಗೆ ಮನವಿ ಮಾಡಿದ್ದರು. ಆದರೂ ಸಹ ಹೆಬ್ಬಾರ್ ಮತದಾನಕ್ಕೆ ಗೈರಾಗುವ ಮೂಲಕ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮಾತುಕತೆಯಂತೆ ನಡೆದುಕೊಂಡ ಹೆಬ್ಬಾರ್, ಸೋಮಶೇಖರ್
ಜೆಡಿಎಸ್ ಹಾಗೂ ಬಿಜೆಪಿ ಸೇರಿಕೊಂಡು ಐದನೇ ಅಭ್ಯರ್ಥಿ ಕಣಕ್ಕಳಿಸಿದ್ದರಿಂದ ರಾಜ್ಯಸಭಾ ಚುನಾವಣೆ ಮತಗಳ ಲೆಕ್ಕಾಚಾರ ಜೋರಾಗಿ ನಡೆದಿತ್ತು. ಅವರು ಇವರಿಗೆ ಮತ ಹಾಕುತ್ತಾರೆ., ಇವರು ಅವರಿಗೆ ಮತ ಹಾಕುತ್ತಾರೆ ಅಂತೆಲ್ಲಾ ಚರ್ಚೆಗಳು ನಡೆದಿದ್ದವು. ಆದ್ರೆ, ಅಂತಿಮವಾಗಿ ಆಡಳಿತರೂಢ ಕಾಂಗ್ರೆಸ್, ಮೈತ್ರಿ ಪಕ್ಷಗಳಿಗೆ ಶಾಕ್ ಕೊಟ್ಟಿದೆ. ಅಂದು ಕೊಂಡಂತೆ ಕಾಂಗ್ರೆಸ್, ಸೋಮಶೇಖರ್ ಅವರನ್ನು ಅಡ್ಡಮತದಾನ ಮಾಡಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಶಿವರಾಮ್ ಹೆಬ್ಬಾರ್ ಅವರನ್ನು ಮತದಾನಕ್ಕೆ ಬರದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.ಮತದಾನಕ್ಕೂ ಹಿಂದಿನ ರಾತ್ರಿ ಅಂದರೆ ನಿನ್ನೆ(ಫೆಬ್ರವರಿ 26) ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್ ನಾಯಕರು, ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಜೊತೆ ಮಾತುಕತೆ ನಡೆಸಿದ್ದರು. ಒಬ್ಬರು ಅಡ್ಡಮತದಾನ ಮಾಡಬೇಕು, ಮತ್ತೊಬ್ಬರು ಮತದಾನಕ್ಕೆ ಗೈರಾಗಬೇಕೆಂದು ಟಾಸ್ಕ್ ನೀಡಿದ್ದರು.ಈಗ ಇಬ್ಬರು ಶಾಸಕರು ಮಾತುಕತೆಯಂತೆ ನಡೆದುಕೊಂಡಿಕೊಂಡಿದ್ದಾರೆ.