ಹಿರಿಯ ಜೈನ ಧರ್ಮಗುರು ಆಚಾರ್ಯ ವಿದ್ಯಾಸಾಗರ ಮಹಾರಾಜ ವಿಧಿವಶ
ರಾಜನಂದಗಾಂವ್:ಫೆ 18: ಹಿರಿಯ ಜೈನ ಧರ್ಮಗುರು ಆಚಾರ್ಯ ವಿದ್ಯಾಸಾಗರ ಮಹಾರಾಜ ಅವರು ಇಂದು ಛತ್ತೀಸ್ಗಢದ ಡೊಂಗರಗಢದಲ್ಲಿ ಚಂದ್ರಗಿರಿ ತೀರ್ಥದಲ್ಲಿ ನಿಧನರಾಗಿದ್ದಾರೆ. ಆಚಾರ್ಯ ವಿದ್ಯಾಸಾಗರ ಮಹಾರಾಜ ಅವರು ಸಲ್ಲೇಖನ ವೃತಕೈಗೊಂಡಿದ್ದರು.ಸಲ್ಲೇಖನ ಎಂಬುದು ಜೈನ ಧಾರ್ಮಿಕ ಆಚರಣೆಯಾಗಿದ್ದು, ಆಧ್ಯಾತ್ಮಿಕ ಶುದ್ಧೀ ಕರಣಕ್ಕಾಗಿ ಸ್ವಯಂಪ್ರೇರಿತ ಉಪವಾಸ ಎಂದು ತೀರ್ಥರ ಹೇಳಿಕೆ ತಿಳಿಸಿದೆ.
ಆಚಾರ್ಯ ವಿದ್ಯಾಸಾಗರ ಮಹಾರಾಜರು ಬೆಳಗಿನ ಜಾವ 2:35ಕ್ಕೆ ಚಂದ್ರಗಿರಿ ತೀರ್ಥದಲ್ಲಿ ಸಲ್ಲೇ ಖನ ಮೂಲಕ ಸಮಾಧಿ ಪಡೆದರು ಎಂದು ಪ್ರಕಟಣೆ ತಿಳಿಸಿದೆ.
ಮಹಾರಾಜರು ಕಳೆದ ಆರು ತಿಂಗಳಿಂದ ಡೊಂಗರಗಢದಲ್ಲಿ ತೀರ್ಥದಲ್ಲಿ ತಂಗಿದ್ದರು. ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದರು.ಕಳೆದ ಮೂರು ದಿನಗಳಿಂದ ಅವರು ಸ್ವಯಂ ಪ್ರೇರಣೆಯಿಂದ ಉಪವಾಸ ಮಾಡುವ ಧಾರ್ಮಿಕ ಆಚರಣೆಯಾದ ಸಲ್ಲೇಖನವನ್ನುಮಾಡುತ್ತಿದ್ದರು. ಆಹಾರ ಸೇವನೆಯನ್ನು ತ್ಯಜಿಸಿದ್ದರು. ಜೈನ ಧರ್ಮದ ಪ್ರಕಾರ, ಇದು ಆಧ್ಯಾತ್ಮಿಕ ಶುದ್ಧೀಕರಣಕ್ಕಾಗಿ ತೆಗೆದುಕೊಳ್ಳಲಾದ ಪ್ರತಿಜ್ಞೆ ಎಂದು ತಿಳಿಸಲಾಗಿದೆ.
ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಸದಲಗಾ ಗ್ರಾಮದಲ್ಲಿ 10 ಅಕ್ಟೋಬರ್ 1946 ರಂದು ಜನಿಸಿದರು. ಅವರು 30 ಜೂನ್ 1968 ರಂದು ರಾಜಸ್ಥಾನದ ಅಜ್ಮೀರ್ ನಗರದಲ್ಲಿ ತಮ್ಮ ಗುರು ಆಚಾರ್ಯಶ್ರೀ ಜ್ಞಾನಸಾಗರ್ ಜಿ ಮಹಾರಾಜ್ ಅವರಿಂದ ಮುನಿದೀಕ್ಷೆಯನ್ನು ಪಡೆದರು.