129 ಮತ ಪಡೆದು ವಿಶ್ವಾಸ ಮತ ಗೆದ್ದ ನಿತೀಶ್ ಕುಮಾರ್, ವಿಪಕ್ಷದ ನಾಲ್ವರಿಂದ ಸಿಎಂ ಪರ ಮತ!
ಪಾಟ್ನಾ: ಬಿಹಾರ ವಿಧಾನಸಭೆಯಲ್ಲಿ ಸಿಎಂ ನಿತೀಶ್ ಕುಮಾರ್ ವಿಶ್ವಾಸ ಮತ ಸಾಬೀತುಪಡಿಸಿದ್ದಾರೆ. 243 ವಿಧಾನಸಭೆ ಕ್ಷೇತ್ರಗಳ ಪೈಕಿ ವಿಶ್ವಾಸ ಮತ ಸಾಬೀತು ಪಡಿಸಲು 122 ಮತಗಳ ಅವಶ್ಯಕತೆ ಇತ್ತು. ನಿತೀಶ್ ಸರ್ಕಾರದ ಪರವಾಗಿ 129 ಮತಗಳು ಚಲಾವಣೆಯಾಗಿವೆ.
ಬಿಹಾರ ವಿಧಾನಸಭೆಯಲ್ಲಿ ನಿತೀಶ್ ಕುಮಾರ್ ಸರ್ಕಾರದ ವಿಶ್ವಾಸಮತ ಪರೀಕ್ಷೆಗೂ ಮುನ್ನವೇ ಎನ್‌ಡಿಎ ಸಮ್ಮಿಶ್ರ ಸರ್ಕಾರದ ಬಹುಮತ ಸಾಬೀತಾಗಿತ್ತು. ಆರ್‌ಜೆಡಿ ಕೋಟಾದಿಂದ ಸ್ಪೀಕರ್ ಆದ ಅವಧ್ ಬಿಹಾರಿ ಚೌಧರಿ ಅವರನ್ನು ಪದಚ್ಯುತಗೊಳಿಸುವ ಪ್ರಸ್ತಾಪದ ಮೇಲಿನ ಮತದಾನದಲ್ಲಿ 125 ಶಾಸಕರು ಸರ್ಕಾರವನ್ನು ಬೆಂಬಲಿಸಿ ಮತ ಚಲಾಯಿಸಿದರೆ 112 ಶಾಸಕರು ಮಾತ್ರ ವಿರೋಧ ಪಕ್ಷದಲ್ಲಿ ಉಳಿದಿದ್ದಾರೆ.
ಸ್ಪೀಕರ್ ಪದಚ್ಯುತಿಗೆ 125 ಶಾಸಕರು ಸರ್ಕಾರದ ಜೊತೆ ನಿಂತಿದ್ದು, ನಿತೀಶ್ ಕುಮಾರ್ ಅವರಿಗೆ ಬಹುಮತ ಇರುವುದು ಸ್ಪಷ್ಟವಾಯಿತು. ಅವಧ್ ಬಿಹಾರಿ ಪದಚ್ಯುತಿ ಹಿನ್ನೆಲೆಯಲ್ಲಿ ಉಪಾಧ್ಯಕ್ಷ ಮಹೇಶ್ವರ ಹಜಾರಿ ಸದನ ನಿರ್ವಹಿಸಿದರು. ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ವಿಧಾನಪರಿಷತ್ ಸದಸ್ಯರಾಗಿರುವ ಕಾರಣ ಸದನದಲ್ಲಿ ಮತದಾನದ ವೇಳೆ ಹಾಜರಿರುವುದಕ್ಕೆ ಮಾಜಿ ಡಿಸಿಎಂ ತೇಜಸ್ವಿ ಆಕ್ಷೇಪ ವ್ಯಕ್ತಪಡಿಸಿದರು.